ಒಟ್ಟು ೨೨ ಕೃತಿಗಳು
೧೩ ಕಥಾ ಸಂಕಲನಗಳು
೩ ಹಾಸ್ಯ ಲೇಖನ ಮತ್ತು ಪ್ರಬಂಧಗಳ ಸಂಕಲನ
೧ ಕವನ ಸಂಕಲನ
೨ ಮಿನಿ ಕಾದಂಬರಿಗಳು
೪ ಜೀವನ ಚರಿತ್ರೆಗಳು

ಪುಸ್ತಕಗಳಿಗಾಗಿ ಇಮೇಲ್ ಮಾಡಿ : madhurakarnam@yahoo.in

“ಕಣ್ಣಾ ಮುಚ್ಚೆ ಕಾಡೇ ಗೂಡೇ” ಕಥಾ ಸಂಕಲನ

ಪರಿವಿಡಿ

೧. ಹೋಳುಪ್ಪಿನಕಾಯಿ
೨. ಕಣ್ಣಾ ಮುಚ್ಚೇ ಕಾಡೇ ಗೂಡೇ..
೩. ಒಳಗುದಿ
೪. ಸ್ವಾರ್ಥ
೫. ನೀರ ಮೇಲಣ ಗುಳ್ಳೆ
೬. ಕಿಟಕಿ
೭. ಬಂಧ…ಬಂಧನ
೮. ಶರಣಾಗತ
೯. ಬೇಲಿ ಹಾಕದ ಹೊಲ
೧೦. ದೇವರ ಮಾತು
೧೧. ಮರಳಿ ಮಣ್ಣಿಗೆ..
೧೨. ಗುಟ್ಟು
೧೩. ಎರಡು ಇಡ್ಲಿ
೧೪. ಹಾಲಿನ ಬೆಲೆ
೧೫. ಚಿಕ್ಕೂ
೧೬. ಸ್ವರ್ಗ ಸೃಷ್ಟಿಸುವವರು

ಕಣ್ಣಾ ಮುಚ್ಚೆ ಕಾಡೇ ಗೂಡೇ” ಕಥಾ ಸಂಕಲನದ ಸಾರಾಂಶ :

ಈ ವಿಶಾಲ ಜಗತ್ತನ್ನು ಸೂತ್ರದಂತೆ ಬಂಧಿಸಿದ ಪ್ರೀತಿಯ ವಿಸ್ತಾರ ಅಗಮ್ಯವಾದದ್ದು. ಪ್ರೀತಿಯ ನೂರೆಂಟು ಮುಖಗಳನ್ನೂ, ಅದು ವ್ಯಕ್ತಪಡಿಸುವ ಸಹಸ್ರಾರು ಭಾವಗಳನ್ನು ಮಾನವ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತ ಅರ್ಥಮಾಡಿಕೊಳ್ಳಲು ಯತ್ನಿಸುತ್ತಾನೆ. ಕೆಲವೊಮ್ಮೆ ಗೆದ್ದರೆ ಕೆಲವೊಮ್ಮೆ ಸೋಲುತ್ತಾನೆ. ಬದುಕು ವಿಚಿತ್ರ ಪರಿಸ್ಥಿಗಳನ್ನು ಸೃಷ್ಟಿಸುತ್ತದೆ. ಎಲ್ಲೋ ಇದ್ದವರನ್ನು ಇನ್ನೆಲ್ಲೋ ತಂದು ಎಸೆಯುತ್ತದೆ. ಅಂಥದರಲ್ಲೂ ಮಾನವೀಯತೆಯನ್ನು ಮರೆಯದೇ ನಡೆಯುವುದು ನಿಜವಾದ ಬದುಕು. ಇದರ ಸುತ್ತ ಸುತ್ತುವ ಹದಿನಾರು ಕಥೆಗಳು ಬದುಕಿನ ಅನೇಕ ಮುಖಗಳನ್ನು ತೆರೆದು ತೋರಿಸುತ್ತವೆ.

ಹೋಳುಪ್ಪಿನಕಾಯಿನಂಜಿಕೊಳ್ಳಲಷ್ಟೇ ಚೆಂದ. ಅದೇ ಊಟವಾದರೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಾಳು ಹೋಳೇ. ಬಾಳಿನಲ್ಲಿ ಒದಗುವ ವಿಪರೀತ ಪರಿಸ್ಥಿತಿಗಳು ನಮ್ಮಿಂದ ನಮ್ಮತನವನ್ನು, ಜಾತಿಧರ್ಮವನ್ನು ಕೊನೆಗೆ ನಮ್ಮವರನ್ನೂ ದೂರ ಮಾಡುತ್ತ ಕಣ್ಣು ಕಟ್ಟಿಕಣ್ಣಾ ಮುಚ್ಚೆ ಕಾಡೇ ಗೂಡೇ ಎನ್ನುತ್ತ ಆಟವಾಡಿಸುತ್ತವೆ. ಹೊರಗೆಲ್ಲ ಹೊಳೆಯುವ ನಗುವ ಬದುಕು ಚೆನ್ನಾಗೇ ಕಂಡರೂ ಒಳಗುದಿ ಬೇರೆಯೇ ಆಗಿರುತ್ತದೆ. ಹೇಗಾದರೂ ಮಿಂಚಿ ಮೆರೆಯಬೇಕು, ಬದುಕಬೇಕೆಂಬ ಹಂಬಲ ಅಸೀಮ ಸ್ವಾರ್ಥಕ್ಕೂ ಕಾರಣವಾಗುತ್ತದೆ. ಅದೆಷ್ಟೇ ಹಾರಾಡಿದರೂ ತೋರಿಕೆಯ ಪ್ರೀತಿ, ವ್ಯಾಮೋಹ, ಸಂಬಂಧಗಳೆಲ್ಲ ನೀರ ಮೇಲಣ ಗುಳ್ಳೆಯಂತೆ. ಒಡೆದ ಕ್ಷಣ ಭ್ರಮ ನಿರಸನವಾಗುವುದು ಸತ್ಯ. ಆದರೂ ನಿಜವಾದ ಪ್ರೀತಿ ಕನಕನ ಖಿಂಡಿಯಲ್ಲಿ ಕೃಷ್ಣ ಗೋಚರಿಸುವಂತೆ ಕಿಟಕಿಯ ಮೂಲಕವೂ ಕಾಣಸಿಗುತ್ತದೆ. ಈ ಪ್ರೀತಿ ಇರದಿದ್ದರೆ ಎಂಥ ಸಂಬಂಧವೂ ಬಂಧ..ಬಂಧನವಾಗುತ್ತದೆ. ಈ ಪ್ರೀತಿ ಸುತ್ತುತ್ತಾ ಸಾಗಿ ಕೊನೆಯ ಗಮ್ಯವಾಗಿ ಭಗವಂತನೆಡೆಗೆ ತಿರುಗುತ್ತದೆ. ಅವನಲ್ಲಿ ಶರಣಾಗತಿ ಎಲ್ಲ ಸಮಸ್ಯೆಗಳಿಗೂ ಉತ್ತರ ಕೊಡುತ್ತ ಮೋಕ್ಷದ ದ್ವಾರ ತೆರೆಯುತ್ತದೆ.

ಪ್ರೀತಿ ಸ್ವಾಭಾವಿಕವಾಗಿಯೇ ಚಿಗುರಿ ಬೆಳೆದರೂ ಅದಕ್ಕೆ ಸಮಾಜದ ಚೌಕಟ್ಟು ಎಂಬ ಬೇಲಿ ಬೇಕೇ ಬೇಕು. ಇಂಥ ಬೇಲಿ ಹಾಕದ ಹೊಲ ಎಂದಿಗೂ ಸ್ಥಿರವಲ್ಲ. ಪ್ರೀತಿ, ಭಕ್ತಿಯೊಂದಿಗೆ ಮಾನವೀಯತೆಯೂ ಹಾಲುಜೇನಿನಂತೆ ಬೆರೆತಾಗಮಾನವ ಆಡುವ ಮಾತುಗಳೆಲ್ಲ ದೇವರ ಮಾತುಗಳಾಗುತ್ತವೆ. ಇವು ನಮ್ಮನ್ನು ಜಗವೆಲ್ಲ ಸುತ್ತಿಸಿದರೂ ಕೊನೆಗೆ ನಮ್ಮ ದೇಶಕ್ಕೆ, ಮರಳಿ ಮಣ್ಣಿಗೆ ಕರೆತರುತ್ತವೆ. ನಮ್ಮ ಗೂಡಿನಲ್ಲಿ ಹಾಯಾಗಿರುವುದೇ ನೆಮ್ಮದಿಯ ಗುಟ್ಟು. ನೆಮ್ಮದಿಯಿಂದಿರಲು, ಹೊಟ್ಟೆ ತುಂಬಿಸಿಕೊಳ್ಳಲು ನಿತ್ಯ ಭೂರಿ ಭೋಜನ ಬೇಕಿಲ್ಲ. ಒಪ್ಪತ್ತಿಗೆ ಎರಡು ಇಡ್ಲಿಯಾದರೂ ಸಾಕು. ಆದರೂ ಬದುಕು ನಮಗೆ ಪ್ರತಿಯೊಂದರ ಮೌಲ್ಯವನ್ನು ಸಮಯಕ್ಕೆ ತಕ್ಕಂತೆ ತೋರಿಸುತ್ತದೆ. ಹಾಲಿಗಾಗಿ ಆರಂಭವಾದ ಯುದ್ಧ ಹಾಲಿನ ಬೆಲೆಯನ್ನು ತಿಳಿಸುತ್ತದೆ. ಆದರೂ ಪ್ರೀತಿಯ ಬೆಲೆಯನ್ನು ಅರಿಯುವುದು ಕಷ್ಟ. ಮನುಜರಷ್ಟೇ ಅಲ್ಲ, ಚಿಕ್ಕೂವಿನಂಥ ಹಕ್ಕಿಯೂ ಪ್ರೀತಿಗೆ ಉತ್ತರವಾಗಿ ಪ್ರೀತಿ ಸುರಿಸುತ್ತದೆ. ಆದರೆ ಪ್ರಸಂಗದ ಅನಿವಾರ್ಯತೆ, ಸ್ವಾರ್ಥ ಮನುಜ ಕಲ್ಲಾಗುವಂತೆ ಮಾಡುತ್ತದೆ. ಪ್ರೀತಿಯನ್ನು ಅರ್ಥ ಮಾಡಿಕೊಂಡು ತಾಯ್ನಾಡನ್ನೂ ಪ್ರೀತಿಸುವವರು ಇದ್ದಲ್ಲೇ ಚಿಗುರಿ ಬೆಳೆದು ತನ್ನೊಂದಿಗೆ ಉಳಿದವರನ್ನೂ ಬೆಳೆಸಬಲ್ಲವರು ಸ್ವರ್ಗ ಸೃಷ್ಟಿಸುವವರು.

ಬೌದ್ಧಾವತಾರ ಕಥಾ ಸಂಕಲನ

ಪರಿವಿಡಿ

೧. ನೀಲಿ ಛತ್ರಿ
೨. ಬೌದ್ಧಾವತಾರ
೩. ಹಾಥಿ ಕೆ ದಾಂತ
೪. ಝರೋಕಾ
೫. ಸಾಮಾನ್ಯ
೬. ಮೊಬೈಲ್ ಮರೆತ ಒಂದು ದಿನ
೭. ಢಾಲು
೮. ಭರವಸೆ
೯. ಅಂತಃಕರಣ
೧೦. ಅನುಬಂಧ
೧೧. ಹೀಗೊಂದು ಸಂವಾದ
೧೨. ಕನಸುಗಳು
೧೩. ತುತ್ತಿನ ತಾಕತ್ತು

ಬೌದ್ಧಾವತಾರ ಕಥಾ ಸಂಕಲನದ ಸಾರಾಂಶ :

ಲೇಖಕಿಯ ಮಾತು
ಮಾನವನ ವರಸೆಗಳು ವಿಚಿತ್ರವಾದವು. ತನಗೆ ಬೇಡವಾದವರ ಮುಂದೆ ಎದೆ ಸೆಟೆಸಿ ನಿಂತು ತಾನೇ ಶ್ರೇಷ್ಠ ಎಂದು ತೋರಿಸಿಕೊಂಡರೆ ಬೇಕಾದವರ ಮುಂದೆ ಬಾಗಿ ವಿನೀತನಾಗುತ್ತಾನೆ. ಕೆಲವೊಮ್ಮೆ ಕಠಿಣ ಹೃದಯಿಯಾದರೆ ಮಗದೊಮ್ಮೆ ಮಾನವೀಯತೆಯ ಹರಿಕಾರನಾಗುತ್ತಾನೆ. ಇದಕ್ಕೆ ಹೆಣ್ಣು, ಗಂಡೆಂಬ ಭೇದವಿಲ್ಲ. ಒಮ್ಮೊಮ್ಮೆ ಮುಖವಾಡಗಳನ್ನು ತೊಟ್ಟು ಬದುಕುತ್ತಾನೆ. ಮತ್ತೊಮ್ಮೆ ಕನಸುಗಳಲ್ಲೇ ಬದುಕು ಸವೆಸುತ್ತಾನೆ. ಇಲ್ಲಿನ ಹನ್ನೆರೆಡು ಕತೆಗಳು ಮನುಷ್ಯನ ಅನೇಕ ರೂಪಗಳನ್ನು ಎತ್ತಿ ತೋರಿಸುತ್ತವೆ.
ನೀಲಾಕಾಶ ಇಡೀ ಭೂಮಿಗೆ ಕೊಡೆ ಹಿಡಿದಂತೆ ಪೊರೆಯುವ ಗುಣ ಉಳ್ಳವರು ಮನೆಗೆ.. ಮನೆಯವರಿಗೆಲ್ಲ ನೀಲಿ ಛತ್ರಿ ಹಿಡಿಯಲೇಬೇಕು. ಆಗಲೇ ಬದುಕಿನ ಬಂಡಿ ಮುನ್ನಡೆಯುವುದು. ಜೀವನೋಪಾಯಕ್ಕಾಗಿ ಒದ್ದಾಡುತ್ತ.. ಗುದ್ದಾಡುತ್ತ ಏನೆಲ್ಲ ಅವತಾರಗಳನ್ನೆತ್ತಿದರೂ ಕೊನೆಗೆ ಶಾಂತಿಗಾಗಿ ಬೌದ್ಧಾವತಾರ ಎತ್ತಲೇ ಬೇಕು. ಅದೇ ಬಾಳಿನ ಪರಮ.. ಚರಮ ಸತ್ಯ. ಸಂಬಂಧಗಳಲ್ಲಿ ನಿಷ್ಠೆ, ಪ್ರಾಮಾಣಿಕತೆ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಒಳ್ಳೆಯತನದ ಮುಖವಾಡ ತೊಟ್ಟು ತೆರೆಯ ಹಿಂದೆ ಆಡುವುದೊಂದು..ಮಾಡುವುದು ಮತ್ತೊಂದು ಆದಾಗ ಹಾಥಿ ಕೆ ದಾಂತನಂತಹ ಕತೆಯಾಗುತ್ತದೆ. ಬದುಕೆಂಬ ನಾಟಕದಲ್ಲಿ ನಿತ್ಯ ನಮ್ಮ ಝರೋಕಾ ನಡೆದೇ ಬಿಟ್ಟಿರುತ್ತದೆ. ಆ ಭಗವಂತ ನ್ಯಾಯದಾನ ಮಾಡುತ್ತಲೇ ಇರುತ್ತಾನೆ. ಅವನ ನ್ಯಾಯ ಎಂದಿಗೂ ತಪ್ಪುವುದಿಲ್ಲ. ಅವನ ಮುಂದೆ ನಾವೆಲ್ಲ ಸಾಮಾನ್ಯರೇ. ಅತಿಯಾಸೆಗಳನ್ನು ಹೊತ್ತು ಅಸಾಮಾನ್ಯರಿಗೆ ಹೋಲಿಸಿದರೆ ಬದುಕಿನ ದಿಕ್ಕೇ ಬದಲಾಗಬಹುದು. ಇತ್ತೀಚೆಗಂತೂ ನಮ್ಮ ಬಾಳು ಆಧುನಿಕತೆಗೆ ತೆರೆದುಕೊಂಡು ಡಿಜಿಟಲ್ ಸಾಧನಗಳೇ ಕಣ್ಣುಗಳಾಗಿವೆ. ತಂತ್ರಜ್ಞಾನವಿಲ್ಲದಿರೆ ಕುರುಡಾದಂಥ ಪರಿಸ್ಥಿತಿ. ಹಾಗಿರುವಾಗ ಮೊಬೈಲ್ ಮರೆತ ದಿನ ಬದುಕೇ ಕಷ್ಟ. ಆದರೆ ಅದೂ ಒಮ್ಮೊಮ್ಮೆ ವರವಾಗಬಹುದು.
ಇಂದಿನ ದಿನಗಳಲ್ಲಿ ಯಾರನ್ನೂ ನಂಬುವಂತಿಲ್ಲ. ಸ್ವತಃ ಮಕ್ಕಳನ್ನೂ ಸಹ. ಜೀವವನ್ನೇ ಒತ್ತೆ ಇಟ್ಟು ಬೆಳೆಸಿದರೂ ಕೈಜಾರಿದಾಗ ನಮಗೆ ನಾವೇ ಢಾಲು ಆಗಿ ರಕ್ಷಿಸಿಕೊಳ್ಳಬೇಕು… ಬದುಕಬೇಕು. ನಂಬಿರುವ ದೈವದ ಮೇಲೆ ಭರವಸೆ ಇಟ್ಟು ಬದುಕು ಕಟ್ಟಿಕೊಳ್ಳಬೇಕು. ಶುದ್ಧ ಭಕ್ತಿಯನ್ನಷ್ಟೇ ಅವನಿಗೆ ಅರ್ಪಿಸಿದರೂ ಸಾಕು. ಅವನ ಅಂತಃಕರಣ ಸಮುದ್ರಕ್ಕಿಂತಲೂ ದೊಡ್ಡದು. ಅಲ್ಲಿ ಮೋಸ, ವಂಚನೆಗಳಿಗೆ ಜಾಗವೇ ಇಲ್ಲ. ಸಂಬಂಧಗಳನ್ನು ಮೀರಿದ ಶುದ್ಧ ಮಾನವೀಯ ಅನುಬಂಧ ನಮ್ಮ ಕೈ ಹಿಡಿದು ಕಾಪಾಡುತ್ತದೆ. ಆ ದೈವೀ ಶಕ್ತಿಯಲ್ಲಿ ಮನಸ್ಸನ್ನು ಕೀಲಿಸಿಟ್ಟು ಅನನ್ಯವಾಗಿ ಶರಣಾಗತರಾದಾಗ ಹೀಗೊಂದು ಸಂವಾದವನ್ನೂ ನೀವು ಶಕ್ತಿಯೊಂದಿಗೆ ನಡೆಸಬಲ್ಲಿರಿ. ನಂಬಿ ನಡೆದಾಗ ನಿಮ್ಮ ಸಾತ್ವಿಕ ಕನಸುಗಳು ನಿಜವಾಗಬಲ್ಲವು. ರೆಕ್ಕೆ ಕಟ್ಟಿಕೊಂಡು ಹಾರಬಲ್ಲವು.
ನನ್ನ ಹದಿನೇಳನೇ ಕೃತಿಯಾಗಿ “ಬೌದ್ಧಾವತಾರ” ಹೊರಬರುತ್ತಿದೆ. ವಿವಿಧ ಭಾವಗಳ ಹನ್ನೆರೆಡು ಕತೆಗಳು ಮನುಷ್ಯನ ಮನಸಿನ ಬೇರೆಬೇರೆ ಆಯಾಮಗಳನ್ನು ತೆರೆದು ತೋರಿಸುತ್ತವೆ. “ತೇಜು” ಪ್ರಕಾಶನದ ಅಣಕು ರಾಮನಾಥ್ ಸರ್ ಇದಕ್ಕೆ ತಮ್ಮ ನುಡಿಗಳನ್ನೂ ಬರೆದು ಪ್ರಕಟಿಸಿದ್ದಾರೆ. ಅವರಿಗೆ ನಾನು ಚಿರಋಣಿ. ಖ್ಯಾತ ಸಾಹಿತಿ ಮತ್ತು ವಿಮರ್ಶಕಿಯಾದ ಡಾ.ವಿಜಯಾ ಸುಬ್ಬರಾಜ್ ಮುನ್ನುಡಿಯ ರೂಪದಲ್ಲಿ “ಒಂದು ಅನಿಸಿಕೆ” ಬರೆದು ಹರಸಿದ್ದಾರೆ. ಅವರಿಗೆ ನನ್ನ ಅನೇಕಾನೇಕ ಧನ್ಯವಾದಗಳು.

ಆಲದ ನೆರಳು ಕಥಾ ಸಂಕಲನ

ಪರಿವಿಡಿ

೧) ಅನಾವರಣ
೨) ಆಲದ ನೆರಳು
೩) ನೆಲದ ಅಂಚು
೪) ಎರಡು ಮುಂಜಾವುಗಳ ನಡುವೆ
೫) ಅಕ್ಕಮ್ಮ
೬) ತುಮಲ
೭) ಸುಧಾರಣೆ
೮) ಹಂಸಕ್ಷೀರಪಾನ
೯) ಹೂಮನ
೧೦) ಸೀತಾಶ್ರುತಿ
೧೧) ಅತಿಥಿ
೧೨) ಪಲಾಯನ

ಆಲದ ನೆರಳು ಕಥಾ ಸಂಕಲನದ ಸಾರಾಂಶ :

ಲೇಖಕಿಯ ಮಾತು
ಮನದ ಸಂಕುಚಿತ ಆವರಣಗಳೆಲ್ಲ ಅನಾವರಣವಾದಾಗ ದೊರಕುವ ಆನಂದ ಅವರ್ಣನೀಯ. ಅದು ಶಾಶ್ವತವಾಗಿರಬೇಕೆಂದು ನಾವು ಬಯಸಿದರೂ ಸಾಧ್ಯವಾಗುವದಿಲ್ಲ. ಆಲದ ನೆರಳು ಎಷ್ಟೇ ತಂಪಾಗಿ, ಹಿತವಾಗಿದ್ದರೂ ಕೂರಲಷ್ಟೇ ಚೆನ್ನ. ಬದುಕಲು, ಬೆಳೆಯಲು ನಾವು ಮತ್ತೆ ಬಿಸಿಲಿನತ್ತ ಮುಖ ಮಾಡಬೇಕು. ಬೆಳೆದು ಎಷ್ಟೇ ಎತ್ತರಕ್ಕೆ ಹಾರುತ್ತೇನೆಂದರೂ ನಮ್ಮ ನೆಲದ ಅಂಚಿನಲ್ಲೇ ನಾವಿರುತ್ತೇವೆ. ಇದ್ದಷ್ಟೇ ಕಾಲು ಚಾಚುವದು ಹಿತ. ಕಲುಷಿತ ಮನಗಳು ಹಿತವಚನಗಳನ್ನು ಕೇಳಿಯಾವೇ? ಚಿಕ್ಕ ಕಾರಣ ಸಿಕ್ಕರೂ ಜಾತಿ, ಮತಗಳ ಬಣ್ಣ ಮೆತ್ತಿ ಹೋರಾಟಕ್ಕೇ ಅಣಿಯಾಗುತ್ತಾರೆ. ಈ ಗಲಾಟೆಯಲ್ಲಿ ಎಷ್ಟೊಂದು ಅನ್ಯಾಯಗಳು ನಡೆದು ಹೋಗುತ್ತವೆ. ಎಷ್ಟೋ ಗಂಗೆಯರು ಅಪವಿತ್ರರಾಗಿ ಜನ್ಮವಿಡೀ ಕೊರಗುತ್ತಾರೆ. ಈ ಮಾನಸಿಕ ತುಮಲಕ್ಕೆ ಅಂತ್ಯವೆಂಬುದಿಲ್ಲ.
ತಲೆಮಾರುಗಳ ನಡುವಿನ ಅಂತರಕ್ಕೆ ಹೊಂದಾಣಿಕೆ ಬಿಟ್ಟರೆ ಪರಿಹಾರವಿಲ್ಲ. ಸುಧಾರಣೆ ನಿಧಾನವಾಗಿ ಮನ:ಪೂರ್ವಕ ನಡೆಯಬೇಕೆ ವಿನ: ಬಲವಂತದಿಂದಲ್ಲ. ಬದುಕಿನಲ್ಲಿ ಹಣದ ಹಾದಿಯಲ್ಲಿ ಓಡುವದೊಂದೇ ಗುರಿಯಲ್ಲ. ಹಂಸಕ್ಷೀರಪಾನ ಮಾಡಿದಂತೆ ಸುಖದು:ಖಗಳನ್ನು, ಸವಿಗಳಿಗೆಗಳನ್ನು ಅನುಭವಿಸುತ್ತ ಮಾಗುತ್ತ ಸಾಗಬೇಕು. ಆಗಲೇ ಬಾಳು ಸಾರ್ಥಕ. ಹೂಮನದ ಮೊಗ್ಗುಗಳು ನೈಸರ್ಗಿಕವಾಗಿ ಅರಳಿದರೆ ಚೆಂದ. ವಿಪರೀತ ಒತ್ತಡದ ಮಧ್ಯೆ ಅರಳಿಸಿದರೆ ನಲುಗಿ ಹೋಗುತ್ತವೆ. ಪುರಾಣ ಕಾಲದಿಂದಲೂ ಹೆಣ್ಣಿನ ಅಂತರಂಗದ ಮಾತುಗಳಿಗೆ ಬೆಲೆಯಿಲ್ಲ. ಇದಕ್ಕೆ ದೈವೀ ಶಕ್ತಿಯುಳ್ಳ ಸೀತೆಯೂ ಹೊರತಾಗಲಿಲ್ಲ. ಆತ್ಮೀಯತೆ ಬೆಳೆದು ಆಂತರ‍್ಯವನ್ನು ತಟ್ಟಿದರೆ ಜಾತಿ, ಧರ್ಮಗಳೆಂಬ ಗೋಡೆಗಳಾವೂ ನಿಲ್ಲುವದಿಲ್ಲ. ಮಾನವೀಯತೆ ಬೆರೆತ ಪ್ರೀತಿ ಮೆರೆದು ಮುಚ್ಚಿದ ಕದ ತೆರೆದು ಅತಿಥಿಗಳ ಸ್ವಾಗತವಾಗುತ್ತದೆ. ಆದರೆ ಎಲ್ಲ ಹೃದಯಗಳೂ ವಿಶಾಲವಾಗಿ ಒಂದೇ ತೆರನಾಗಿರುವದಿಲ್ಲ. ಸ್ವಾರ್ಥ ಹೆಚ್ಚಾಗಿ ವಾಸ್ತವ ಚುಚ್ಚಿದರೆ ವಿಧಿಯಿಲ್ಲದೇ ಪಲಾಯನ ಮಾಡಲೇಬೇಕಾಗುತ್ತದೆ.
ಆಲದ ನೆರಳು ನನ್ನ ಏಳನೇ ಕೃತಿಯಾಗಿ ಹೊರಹೊಮ್ಮಿದೆ.

.

ಒಳಗಣ ಜ್ಯೋತಿ ಕಥಾ ಸಂಕಲನ

ಪರಿವಿಡಿ

೧ ಕೆಂಡಕ್ಕಿಟ್ಟ ರೊಟ್ಟಿ
೨ ಬೇಟೆ
೩ ಹಿಂಬಾಲಕ
೪ ಒಳಗಣ ಜ್ಯೋತಿ
೫ ಮಾತೃದೇವೋಭವ
೬ ನಡಮನಿ ಖಂಬ
೭ ರೂಪದರ್ಶಿ
೮ ಆರಾಧನೆ
೯ ದಂಡಪಿಂಡ
೧೦ ಹ್ಯಾಕ್
೧೧ ಮುತ್ತಾದವಳು

ಒಳಗಣ ಜ್ಯೋತಿ ಕಥಾ ಸಂಕಲನದ ಸಾರಾಂಶ :

ಲೇಖಕಿಯ ಮಾತು
ನಮ್ಮ ಬದುಕೊಂದು ಕೆಂಡಕ್ಕಿಟ್ಟ ರೊಟ್ಟಿಯ ಹಾಗೆ. ಹದವಾಗಿ ಎರಡೂ ಬದಿ ಬೇಯಿಸಿದರೆ ಮಾತ್ರ ತಿನ್ನಲು ಸಾಧ್ಯ. ವಿವೇಚನೆ ಇಲ್ಲದೆ ನಡೆದರೆ ಯಾರಿಗೋ ಬೇಟೆಯಾಗುವ ಅಪಾಯ ತಪ್ಪಿದ್ದಲ್ಲ. ಹೊಸ ಜಗತ್ತಿನ ಕ್ರೌರ‍್ಯಕ್ಕೆ ಕಾಣದೇ ತುತ್ತಾಗುವುದುಂಟು. ಸುಖ ದೊರಕಬೇಕೆಂದರೆ ತೋರಿಕೆಯ ಆಡಂಬರ ತೊರೆದು ಶಾಂತಿ, ನೆಮ್ಮದಿಯ ಹಿಂಬಾಲಕರಾಗಬೇಕು. ಇಲ್ಲವಾದರೆ ಬಾಳೇ ಹ್ಯಾಕ್ ಆಗಿ ನುಣ್ಣಗೆ ಕಾಣುತ್ತಿದ್ದ ದೂರದ ಬೆಟ್ಟದ ಕಂದಕ, ಕೊರಕಲುಗಳು ನಿಧಾನವಾಗಿ ಕಣ್ಣಿಗೆ ರಾಚುತ್ತವೆ. ಆಧುನಿಕತೆಯ ಸೋಗು ಬಿಟ್ಟು ಅಂತರಂಗದ ಕರೆಗೆ ಓಗೊಟ್ಟರೆ ಒಳಗಣ ಜ್ಯೋತಿ ಪ್ರಜ್ವಲಿಸುತ್ತದೆ. ಸತ್ಯಾಸತ್ಯತೆಗಳ ಅರಿವಾಗುತ್ತದೆ.
ಮಾತೃದೇವೋಭವ ಎನ್ನುವ ಮಾತಿನಂತೆ ತಾಯಿಯ ಸ್ಥಾನ ಯಾವಾಗಲೂ ಹಿರಿದು. ಅದಕ್ಕೆ ಅವಮಾನ ಮಾಡಿದವರಿಗೆ ಅನಾಹುತ ತಪ್ಪಿದ್ದಲ್ಲ. ಆಕೆ ನಡುಮನೆಯ ಖಂಬದಂತೆ ಇಡೀ ಮನೆಯನ್ನು..ಕುಟುಂಬವನ್ನು ಗಟ್ಟಿಯಾಗಿ ಹಿಡಿದು ಆಧಾರಸ್ತಂಭವಾಗಿ ನಿಂತಿರುತ್ತಾಳೆ. ಬಾಹ್ಯರೂಪಕ್ಕಿಂತ ಅಂತರಂಗದ ನಿಷ್ಕಲ್ಮಷತೆ ಹೆಚ್ಚಾಗಿದ್ದರೆ ಮಾತ್ರ ಒಬ್ಬ ಸ್ತ್ರೀ ನಿಜವಾದ ರೂಪದರ್ಶಿಯಾಗುತ್ತಾಳೆ. ನಮ್ಮ ಸಂಸ್ಕೃತಿ ಕೆಲವೊಮ್ಮೆ ನಮಗಿಂತ ವಿದೇಶೀಯರಿಗೆ ಹೆಚ್ಚು ಅರ್ಥವಾಗಿ ಆರಾಧನೆಯ ದ್ಯೋತಕವಾಗುತ್ತದೆ. ದಂಡಪಿಂಡಗಳೆನ್ನಿಸಿಕೊಂಡವರಿಗೂ ಬದುಕು ಒಮ್ಮೊಮ್ಮೆ ಪರಿಶ್ರಮದ ಮೂಸೆಯಲ್ಲಿ ಕರಗಿಸುತ್ತ ಗುರಿ ತಲುಪಿಸಿ ಯಶಸ್ವಿಯಾಗಿಸುತ್ತದೆ. ನಿರಂತರ ಚಲನೆಯುಳ್ಳ ಜೀವನ.. ಸಾಧಿಸುವ ಛಲವಿದ್ದವರನ್ನು ಸಪ್ತಸಾಗರದಾಚೆಯೂ ಬೆಳೆಸಿ ಮುತ್ತಾದವಳು ಎನಿಸಿ ಶಾಂತವಾಗುತ್ತದೆ.
ನಿಮ್ಮೆಲ್ಲರ ಪ್ರೋತ್ಸಾಹದಿಂದ ‘ಕಥೆ’ಗಳೆಂಬ ಮುತ್ತುಗಳನ್ನು ಪೋಣಿಸುತ್ತ “ಒಳಗಣ ಜ್ಯೋತಿ’ ಎಂಬ ಹತ್ತನೇ ಕೃತಿಯನ್ನು ಮಾಲೆಯಾಗಿ ನಿಮಗೆ ನೇರವಾಗಿ ಸಮರ್ಪಿಸುತ್ತಿದ್ದೇನೆ.

ದೀಪದ ಕೆಳಗಿನ ಕತ್ತಲೆ ಕಥಾ ಸಂಕಲನ

ಪರಿವಿಡಿ

೧ ತೆರೆಮರೆಯ ಸತ್ಯಗಳು
೨ ದೀಪದ ಕೆಳಗಿನ ಕತ್ತಲೆ
೩ ಸಿನಿಮಾ ಅಲ್ಲ.. ಜೀವನ
೪ ಜನಕರಾಜನ ಕುವರಿಯಂತೆ..
೫ ವಿಸ್ಮೃತಿ
೬ ಸಾವಿಲ್ಲದ ಮನೆಯ ಸಾಸುವೆ
೭ ಬೆಲ್ಲದ ಕಟ್ಟೆ ಕಟ್ಟಿ……
೮ ಖಳ.. ನಾಯಕ
೯ ಕಾಮಾರಿ
೧೦ ಕನಸಿನೊಳಗಣ ಮನಸು

ದೀಪದ ಕೆಳಗಿನ ಕತ್ತಲೆ ಕಥಾ ಸಂಕಲನದ ಸಾರಾಂಶ :

ಲೇಖಕಿಯ ಮಾತು
ಈ ಬದುಕೇ ವಿಚಿತ್ರ. ತೆರೆಮರೆಯ ಸತ್ಯಗಳು, ಮರೆಯಲ್ಲಿರಬೇಕಾದ ಸೌಂದರ‍್ಯ ಹೊರಗೆ ಬಂದರೆ ವಿಕಾರವಾಗುತ್ತವೆ. ಬದುಕು ನಲುಗುತ್ತದೆ. ದೀಪದ ಕೆಳಗಿನ ಕತ್ತಲೆಯಂತೆ.. ಪ್ರಸಿದ್ಧ ವ್ಯಕ್ತಿಯ ಗತ ಇತಿಹಾಸ, ಕುಟುಂಬವಾತ್ಸಲ್ಯ ಸದಾ ಉನ್ನತವಾಗಿರುವುದಿಲ್ಲ. ಅವರ ಸಂಗಾತಿಯ ಮಾತು ಬದುಕಿನ ಇನ್ನೊಂದು ಮುಖಕ್ಕೆ ಕನ್ನಡಿ ಹಿಡಿಯಬಲ್ಲುದು. ಎಕೆಂದರೆ ಈ ಬದುಕು ಮೂರು ಗಂಟೆಗಳ ಕಾಲ ನೋಡಿ ಹೊರಬರುವ ಸಿನಿಮಾ ಅಲ್ಲ..ಜೀವನ. ಉದ್ದಕ್ಕೂ ಪರಸ್ಪರ ಅರಿತು.. ಹೊಂದಿಕೊಂಡು ಸಾಗಿಸಬೇಕಾದ ಬದುಕು. ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಜನಕರಾಜನ ಕುವರಿಯಂತೆ.. ಕಷ್ಟ ಅನುಭವಿಸಬೇಕಾಗಬಹುದು. ಬಾಳನ್ನೆಲ್ಲ ಪರರಿಗಾಗೇ ತೇಯ್ದರೂ ಕೊನೆಗೆ ಉಳಿಯುವುದು ರಾಮನ ಜಪವೊಂದೇ. ಆದರೆ ಪರರ ಬದುಕು ಕಟ್ಟಿಕೊಡಲು ಕೆಲವೊಮ್ಮೆ ನಾಟಕವಾಡುವ ಪರಿಸ್ಥಿತಿ ಬರಬಹುದು. ಎಲ್ಲ ವಿಸ್ಮೃತಿಯಾಗಿ ತಿರುಗಿ ಸ್ಮೃತಿ ಬಂದು ಜೀವನವೆಂಬ ನಾಟಕರಂಗದಲ್ಲಿ ಪ್ರವೇಶ ಮಾಡುವಂತೆ..
ಕರೆಯದೇ ಬರುವ ಸಾವಿಗೆ ಹೆದರಿ ದೂ..ರ ಓಡುತ್ತ ಬಳಸು ದಾರಿಗಳಲ್ಲಿ ತಪ್ಪಿಸಿಕೊಳ್ಳುತ್ತ ಸಾಗಿದಾಗ ಸಾವಿಲ್ಲದ ಮನೆಯ ಸಾಸುವೆ ತಾರೆಂದ ಬುದ್ಧನ ನೆನಪಾಗಿತ್ತು. ಮುಪ್ಪಿನಲ್ಲಿ ಮುಕ್ತರಾಗಲು ಹಂಬಲಿಸುವಾಗಲೇ ಅದರ ಮಹತ್ವ ಅರಿವಾಗುವುದು. ಆದರೂ ಅಂತರಂಗದಲ್ಲಿ ವಿಷ ತುಂಬಿಕೊಂಡ ಕೆಲವು ಜನ ಮಾತ್ರ ಬದಲಾಗುವುದೇ ಇಲ್ಲ. ಬೆಲ್ಲದ ಕಟ್ಟೆ ಕಟ್ಟಿದರೂ ಬೇವಿನ ಬೀಜವ ಬಿತ್ತಿದಾಗ ಬರುವ ಫಸಲು ಕಹಿಯೇ. ಇದಕ್ಕೆ ವ್ಯತಿರಿಕ್ತವಾಗಿ ಖಳನಾಗಿ ನಟಿಸುವವನು ನಿಜ ಜೀವನದಲ್ಲಿ ಕುಟುಂಬವತ್ಸಲನಾಗಿ.. ಪರೋಪಕಾರಿಯಾಗಿ.. ಉದಾತ್ತ ನಾಯಕನಾಗಿ ಹೀರೋ ಆಗಿರಬಹುದು. ಖಳ.. ನಾಯಕನಂತೆ. ಏನೇ ಆದರೂ ಕಾಮ, ಪ್ರೇಮಕ್ಕೆಲ್ಲ ಮನಸ್ಸೇ ಮುಖ್ಯ ಕಾರಣ. ಕಾಮದ ಅತ್ಯಾಸೆ ಬಿಡುವವರೆಗೂ ಕಾಮಾರಿ ಕಾಣಿಸಲಾರ. ಸಂಸಾರ ಹಸನಾಗಲಾರದು. ಈ ಮನಸ್ಸೆಂಬ ವಿಚಿತ್ರ ಮಾಯೆ ಸ್ಥಿಮಿತದಲ್ಲಿದ್ದರೆ ಸರಿ. ಇಲ್ಲವಾದರೆ ಕನಸಿನಲ್ಲೂ ಬೆಚ್ಚುವಂತೆ ಮಾಡುತ್ತದೆ. ಕನಸಿನೊಳಗಣ ಮನಸು ಕೋಲಾಹಲವನ್ನೆಬ್ಬಿಸಿ ಬದುಕಿನ ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಮನಸ್ಸು.. ಮನಸ್ಸಿನ ಒಡೆಯನಾದ ಮನುಷ್ಯ ಚಿಂತೆಗಳನ್ನೆಲ್ಲ ತೊರೆದು ಶುದ್ಧವಾಗಿ..ಆನಂದವಾಗಿ ಬಂದದ್ದೆಲ್ಲ ಬರಲಿ ಎಂದು ಎದುರಿಸಿದರೆ ಸುಂದರ ಬದುಕು ಸಾಧ್ಯ.
ಈ ಹತ್ತು ಕಥೆಗಳನ್ನು ಹೊತ್ತು ಹೆತ್ತು ಬೆಳೆಸಿ “ದೀಪದ ಕೆಳಗಿನ ಕತ್ತಲೆ”ಎಂಬ ಪುಸ್ತಕದ ರೂಪದಲ್ಲಿ ನೇರವಾಗಿ ನಿಮ್ಮ ಮುಂದಿಟ್ಟಿದ್ದೇನೆ.

ಅವತಾರ ಕಥಾ ಸಂಕಲನ

ಪರಿವಿಡಿ

೧ ಅವತಾರ
೨ ಸೌದಾಮಿನಿಯ ರಂಗವಲ್ಲಿ
೩ ಹುಡುಕಿದರಷ್ಟೇ.. ..ದಾರಿ
೪ ವಿದೇಶಕಾಲ
೫ ಮಾಗುವ ಹೊತ್ತು
೬ ಪರಂಪರಾನುಗತ
೭ ಪ್ರತೀಕಾರ
೮ ಅರ್ಹತೆ
೯ ದ್ವಂದ್ವ
೧೦ ಬದಲಾಗುವ ಭಾವಚಿತ್ರಗಳು

ಅವತಾರ ಕಥಾ ಸಂಕಲನದ ಸಾರಾಂಶ :

ಲೇಖಕಿಯ ಮಾತು
ಭಕ್ತಿ ದೇವರ ಪದತಲದಲ್ಲಿ ಸಮರ್ಪಣೆಯಾಗಬೇಕೇ ಹೊರತು ಮಾರಾಟದ ಸರಕಾಗಬಾರದು. ಹಾಗಾದಲ್ಲಿ ಅದರ ಪಾವಿತ್ರತೆ ಹಾಳಾಗಿ ಅವತಾರವೇ ಸಮಾಪ್ತಿಯಾಗಬಹುದು. ಪ್ರೇಮವೂ ಅಷ್ಟೇ.. ..ದುಡ್ಡು, ಕಾಸು, ತಾರಾಪಟ್ಟ, ಅಂತಸ್ತುಗಳ ವ್ಯಾಮೋಹ ತೊರೆದು ಒಳಗಣ್ಣಿನಿಂದ ನೋಡಿದಾಗ ಮಾತ್ರ ನಿಜವಾದ ಹರಿವಿನ ಅರಿವಾಗುವದು. ಮನದಂಗಳದಲ್ಲಿ ಪ್ರೇಮಿಯ ರೂಪ ರಂಗವಲ್ಲಿಯಂತೆ ಅಚ್ಚೊತ್ತಿ ಸಮಾಜದ ಬಗ್ಗೆ ಯೋಚಿಸದೇ ಪ್ರೇಮದಲ್ಲೇ ಮುಳುಗಿ ಬದುಕು ಕಟ್ಟಿಕೊಂಡಾಗ ಮಾತ್ರ ಬಾಳು ಸಾರ್ಥಕ. ಬದುಕಲು ಆಮಿಷ ತುಂಬಿದ ನೂರಾರು ಮಾರ್ಗಗಳಿರಬಹುದು. ತಡಕಾಡಿ ಹುಡುಕಿದಾಗ ಮಾತ್ರ ಸಿಕ್ಕುವುದು ಪ್ರಾಮಾಣಿಕವಾದದ್ದೊಂದೇ ದಾರಿ. ಅದುವೇ ರಾಜಮಾರ್ಗವಾಗಬೇಕು. ಇತಿಹಾಸವೆಲ್ಲ ನಿಜವಾದರೂ ಗ್ರಹಿಕೆ ಅವರವರ ದೃಷ್ಟಿಯ ವ್ಯಾಪ್ತಿಗೆ ನಿಲುಕಿದ್ದು. ಒಳಿತು ಕೆಡಕುಗಳು ಎಲ್ಲೆಲ್ಲೂ ತುಂಬಿದ್ದರೂ ಒಳ್ಳೆಯದನ್ನೇ ಆರಿಸಿಕೊಳ್ಳುವ ದೃಷ್ಟಿಕೋನ ನಮ್ಮದಾಗಿದ್ದರೆ ದೇಶಕಾಲವಾಗಲಿ, ವಿದೇಶಕಾಲವಾಗಲಿ.. ..ಕೆಟ್ಟ ಇತಿಹಾಸಗಳು ಮರುಕಳಿಸುವದಿಲ್ಲ. ಹಣ್ಣು ಮಾಗಿದಂತೆ ಮನುಜನ ಮನಸ್ಸು, ಕಾರ್ಯಗಳು ಸಮಯಕ್ಕೆ ತಕ್ಕಂತೆ ಮಾಗಿದಾಗ ಮಾತ್ರ ಸರಿಯಾದ ಪಥ, ಕರ್ತವ್ಯ, ಮೌಲ್ಯಗಳು ಗೋಚರವಾಗುತ್ತವೆ.
ಭಕ್ತಿಯ ಇನ್ನೊಂದು ಆಯಾಮವೇ ನಂಬಿಕೆ. ಭಗವಂತನಲ್ಲಿ ಅಪಾರ.. ಅಸೀಮ.. ನಂಬಿಕೆಯುಳ್ಳ ಭಕ್ತ , ಪರಂಪರಾನುಗತವಾಗಿ ಬಂದಿರುವ ನಂಬಿಕೆಗೆ ದ್ರೋಹ ಮಾಡುವದಕ್ಕಿಂತ ಪ್ರಾಣ ತ್ಯಜಿಸುವದೇ ಮೇಲೆನ್ನುತ್ತಾನೆ. ಗುಣಾವಗುಣಗಳನ್ನು ಸರಿಯಾಗಿ ಪರಾಮರ್ಶಿಸದೇ ಕೇವಲ ಸೇಡಿನ ಭಾವನೆಯಿಂದ ಪ್ರತೀಕಾರ ತೆಗೆದುಕೊಳ್ಳಲು ಹೊರಟರೆ ಅದು ತಿರುಗುಬಾಣವಾಗುವದೂ ಉಂಟು. ಯಾವುದೇ ವಿಷಯಕ್ಕೂ ಅರ್ಹತೆಯೊಂದೇ ಮಾನದಂಡವಾದರೆ ದೇಶದ ಅಭಿವೃದ್ಧಿಯ ಪಥ ತಾನೇ ತಾನಾಗಿ ತೆರೆದುಕೊಳ್ಳುತ್ತದೆ. ಭಾವ, ಭಾವನೆಗಳು ಒಮ್ಮೊಮ್ಮೆ ದ್ವಂದ್ವದ ಸುಳಿಯಲ್ಲಿ ಸಿಲುಕುವುದುಂಟು. ಆದರೆ ಮಮತೆ ನದಿಯಂತೆ ಕೆಳಮುಖವಾಗೇ ಹರಿಯುವದು ನಿಜ. ಏನೇ ಆದರೂ ಬದುಕಿನ ಚಲನೆ ಮಾತ್ರ ಸೂರ‍್ಯಪ್ರಕಾಶದಷ್ಟೇ ಸತ್ಯ. ಎಂದೋ ಪ್ರತ್ಯಕ್ಷವಾಗಿ ಕಂಡ ಘಟನೆಗಳು ಪರಿಸ್ಥಿತಿಗಳ ಒತ್ತಡದಿಂದ ಪಲ್ಲಟವಾಗಿ ಬದಲಾಗುವ ಭಾವಚಿತ್ರಗಳಾಗುತ್ತವೆ. ಜೀವನದ ಗತಿ ಮುಂದುವರೆಯಬೇಕಾದರೆ ಈ ಭಾವಚಿತ್ರಗಳು ಬದುಕಿನತ್ತ ಮುಖ ಮಾಡಿ ಚಲಿಸುತ್ತಲೇ ಇರಬೇಕು. ನಿರಂತರವಾಗಿ.. ..

ಅವತಾರ     ಅನಿಸಿಕೆ:


ಅವತಾರ ಕತೆಗೆ ಬಹುಮಾನ ಪಡೆದ ನಿಮಗೆ ಅಭಿನಂದನೆಗಳು. ದೀಪಾವಳಿ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವದು ಸಾಮಾನ್ಯ ಸಂಗತಿ ಅಲ್ಲ. ನಿಮ್ಮ ಕತೆ ಪ್ರಸ್ತುತ ಸಮಾಜದ ನೈಜ ಘಟನೆಗಳಿಗೆ ಕನ್ನಡಿ ಹಿಡಿಯುತ್ತದೆ. ಸುಬ್ಬ ‘ಸುಬ್ಬಾಸ್ವಾಮಿ’ಆಗಿ ಬಹು ಎತ್ತರಕ್ಕೆ ಏರಿ ಸಮಾಜದ ಮತ್ತೊಂದು ಕರಾಳ ಮುಖ ಕಂಡು, ಧರಿಸಿದ್ದ ಕಾವಿ ಕಿತ್ತೊಗೆದು ಮತ್ತೆ ಸಾಮಾನ್ಯ ಸುಬ್ಬು ಆಗುವ ಕತೆಯಲ್ಲಿ ಅನೇಕ ರೋಚಕ ತಿರುವುಗಳಿವೆ. ಶೈಲಿಯಲ್ಲಿ ಆಪ್ತತೆ ಇದೆ. ಕೊನೆಯಲ್ಲಿ ಆಟೋದವನು ಹೇಳುವ ಮಾತು ಅಮಾಯಕ, ಅಸಹಾಯಕ ವ್ಯಕ್ತಿಗಳನ್ನು ನೆನಪಿಸುತ್ತದೆ. ಸುಬ್ಬು ಕಾವಿ ಬಿಟ್ಟರೂ ಅವನ ಪರಿವಾರ ಅದಕ್ಕೊಂದು ಕತೆ ಕಟ್ಟಿ ಕಾವಿ ಹಾಗೇ ಉಳಿಸಿಕೊಂಡು ಕಾಸು ಮಾಡುವದು ಭಯಾನಕ ಸತ್ಯದರ್ಶನ. ಎಂಎಸೆಎನ್.(ಎಂ.ಎಸ್.ನರಸಿಂಹಮೂರ್ತಿ)

ಮಧುರಾ ಕರ್ಣಮ್‌ರವರ “ಪರಂಪರಾನುಗತ.. ..”ಕಥೆಯ ಕುರಿತು ಒಂದು ಅನಿಸಿಕೆ


ಪರಂಪರಾನುಗತ ನಂಬಿಕೆಗಳು ಕೇವಲ ಸಂಪ್ರದಾಯಗಳಾಗಿ ಮಾತ್ರ ಪಾಲಿಸಲ್ಪಡದೆ ಆ ಕುಟುಂಬದ ಕೌಟುಂಬಿಕರ ಬದುಕಿನ ಭಾಗವಾಗೇ ಇರುವದು ಭಾರತೀಯ ಸಂಸ್ಕೃತಿಯಲ್ಲಿ ಹೊಸದೇನೂ ಅಲ್ಲ. ಆಯಾ ಮನೆತನಕ್ಕೆ ಸಂಬಂಧಿಸಿದ ರೀತಿ ರಿವಾಜು, ಒಡವೆ ವಸ್ತುಗಳು.. ಕಡೆಗೆ ದೇವರು, ದೇವರು ಮಾಡುವ ವೈಖರಿಯೂ ಬದುಕಿನೊಂದಿಗೆ ಹೆಣೆದುಕೊಂಡು ಅವರ ಅಭಿಮಾನಕ್ಕೆ, ಹೆಮ್ಮೆಗೆ, ಭಕ್ತಿಗೆ ಕಾರಣವಾದಂತೆಯೇ ಕಾಲದೊಂದಿಗೆ ಪಲ್ಲಟಿಸುವ ಸನ್ನಿವೇಶಗಳು, ಸಡಿಲಾಗುವ ನಂಬಿಕೆಯ ಬುನಾದಿಗಳು, ಕುಸಿದು ಬೀಳುವ ಸಂಪ್ರದಾಯದ ಸೌಧಗಳಿಗೂ ಸಾಕ್ಷಿಯಾಗುತ್ತದೆ.
ಮಾನವನ ರಕ್ಷಕ ದೇವರೋ…ದೇವರ ರಕ್ಷಕ ಮಾನವನೋ.. ಎಂಬ ಸಂದಿಗ್ಧ ಎರ್ಪಟ್ಟು ಕಡೆಗೆ ಎಲ್ಲವೂ ಮಾನವ ನಿರ್ಮಿತಿ ಎಂಬ ಕಟು ವಾಸ್ತವದ ನೆಲೆಯಲ್ಲಿ ಪ್ರಸ್ತುತ ಕಥೆ ಓದುಗರನ್ನು ಸೆಳೆದು ನಿಲ್ಲಿಸುತ್ತದೆ. “ನಮ್ಮ ದತ್ತಪ್ಪ ಬರೇ ಮೂರ್ತೆಲ್ಲ, ನಮ್ಮ ನಂಬಿಕಿ, ಅಖಂಡ ವಿಶ್ವಾಸದ ಜೋಡಿ ಜೀವಾ..ನ ಅವನೊಳಗ ತುಂಬೇದ. ಎಲ್ಲಾ ‘ಕೊಟ್ಟ ಬಿಡ್ರಿ, ಬಿಟ್ಟ ಬಿಡ್ರಿ’ ಅಂದರ ಬದಕೋದು ಹ್ಯಾಂಗ?” ಎಂಬ ಶ್ರೀಪಾದರ ತಲ್ಲಣದಿಂದ ಆರಂಭವಾಗುವ ಕಥೆ ತಮ್ಮ ಹಿರಿಯರಿಂದ ದತ್ತವಾಗಿ ಬಂದ ದತ್ತಪ್ಪನ ಮೂರ್ತಿ ತಲೆತಲಾಂತರದಿಂದ ವಿಶಿಷ್ಟವಾಗಿ ಪೂಜಾ ಕೈಂಕರ‍್ಯಗಳನ್ನೊಳಗೊಂಡ ಪರಿ, ಅದನ್ನೀಗ ಪೂಜಿಸಿ ಪಾಲಿಸಿ, ಪೊರೆದು ಪರಂಪರೆಯನ್ನು ಮುಂದುವರೆಸಲಾರದ ವಿವಶತೆಯನ್ನು ಅರಹುತ್ತದೆ. ನಮ್ಮನ್ನು ಪೊರೆಯುತ್ತದೆಂದು ನಾವು ನಂಬುವ ದೈವವನ್ನು ತಾವು ಪೊರೆಯಬೇಕಾದ ವಿರ‍್ಯಾಸದ ಚೋದ್ಯವೊಂದನ್ನು ಬಿಂಕ, ಬಿಗುಮಾನಗಳಿಲ್ಲದೇ ಸರಳವಾಗಿ ಕಟ್ಟಿಕೊಡುತ್ತದೆ. ಶ್ರೀಪಾದರು ಯಾವುದನ್ನು ತಮ್ಮ ಹಕ್ಕು, ಹೆಮ್ಮೆ ಎಂದು ಭಾವಿಸಿ ಸಹೋದರನ ಮಗ ಕೇಳಿದಾಗಲೂ ಕೊಡಲೊಪ್ಪದೇ ಆ ಹಕ್ಕು ಕಡೆಯವರೆಗೆ ತಮ್ಮದೆಂದು ಭಾವಿಸಿದ್ದರೋ.. ..ಅದೇ ಅವರ ದಾರಿಯಲ್ಲಿ ತೊಡಕಾಗತೊಡಗುತ್ತದೆ. ದತ್ತನ ಮೂರ್ತಿಗೆ ಅಗತ್ಯ ನಿರ್ವಹಿಸಲೇಬೇಕಾದ ಮಡಿ ಹುಡಿ, ಆಚಾರ, ನೈವೇದ್ಯಗಳನ್ನು ಕಿರಿಯ ತಲೆಮಾರಿನ ಯಾರೂ ಒಪ್ಪಿಕೊಳ್ಳದೇ ಹೋದಾಗ ದಿಗ್ಭ್ರಮೆ ಹಿಡಿದು ಘಾಸಿಗೊಳ್ಳುತ್ತಾರೆ. ಅವರೆಲ್ಲರೂ ದತ್ತನ ಪೂಜೆಗೆ ರ‍್ಯಾಯವನ್ನು ಕಂಡುಕೊಂಡಿರುವದೂ ಮತ್ತು ಕೆಲವರಿಗೆ ಅಂತಹ ಯಾವುದರ ಅಗತ್ಯ ಇಲ್ಲದಿರುವದೂ ಅವರಿಂದ ಅರಗಿಸಿಕೊಳ್ಳಲಾರದಂತೆ ಆ ವಿಗ್ರಹವನ್ನು ಸಮುದ್ರದಲ್ಲಿ ಎಸೆದು ಮರಳುವದೂ ಅವರಿಂದಾಗಲಿಲ್ಲ. ದತ್ತನನ್ನು ಜಲಸಮಾಧಿಯಾಗಿಸುವ ಬದಲು ತಾವೇ ಜಲಸಮಾಧಿಯಾಗುವ ಮಾರ್ಮಿಕ ಅಂತ್ಯ ಅಂತಹ ನಂಬಿಕೆಗಳಂತೆಯೇ ನಂಬುವ ಜನರೂ ಈ ಸಮಾಜಕ್ಕೆ ಪ್ರಸ್ತುತರಲ್ಲ ಎಂಬ ಅಚ್ಚ ಬಿಳಿಯ ಸತ್ಯವನ್ನು ಎತ್ತಿ ಹಿಡಿಯುತ್ತದೆ. ಉತ್ತರ ಕರ್ನಾಟಕದ ಭಾಷೆಯನ್ನು ಸಹಜ ಮಧ್ಯಮ ವರ್ಗದ ಪಾತಳಿಯಲ್ಲಿ ರಮ್ಯವಾಗಿ ದುಡಿಸಿಕೊಂಡ ಲೇಖಕಿಯ ಈ ಕಥೆ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕಥೆಯು ಸರಳತೆ, ಹರಿವು, ಕಲಾತ್ಮಕತೆಯನ್ನು ಸಹಜವಾಗಿ ದಕ್ಕಿಸಿಕೊಂಡಿದೆ. ಮಧುರಾ ಕರ್ಣಮ್ ಈ ಕಥೆಗಾಗಿ ಅಭಿನಂದನಾರ್ಹರು.
-ಉಷಾ ನರಸಿಂಹನ್.

ದಡ ಕಥಾ ಸಂಕಲನ

ಪರಿವಿಡಿ

೧. ಉಕ್ಕು
೨. ಬಿಡುಗಡೆ
೩. ದಡ
೪. ನಕ್ಷತ್ರಗಳು ನಕ್ಕಾಗ..
೫. ಪರಿಧಿ
೬. ಸತ್ಯಪ್ಪನ ಸಾವಿರ ಹೆಜ್ಜೆಗಳು
೭. ಸಮರ್ಪಣೆ
೮. ಗುಳೆ
೯. ಅಳಿದ ಪುಟಗಳು
೧೦. ಸ್ವಾತಿಮುತ್ತು

ದಡ ಕಥಾ ಸಂಕಲನದ ಸಾರಾಂಶ :

ಲೇಖಕಿಯ ಮಾತು
ಕಥೆಗಳ ಪ್ರಪಂಚದಲ್ಲಿ ವಿಸ್ತಾರವಾಗಿ ತೆರೆದುಕೊಳ್ಳುತ್ತಾ ಹೋದಂತೆ ನೂರಾರು ವಿಧದ ಕತೆಗಳು ಎದುರಾಗುತ್ತವೆ. ಅವುಗಳಲ್ಲಿ ಈ ಸಂಕಲನದ ಕತೆಗಳನ್ನು ಇದ್ದು ಜೈಸಿದ ಕತೆಗಳು ಎಂದೇ ಹೆಸರಿಸಿದ್ದೇನೆ. ಜೀವನ ಪ್ರವಾಹದಲ್ಲಿ ಎಷ್ಟೇ ಕಷ್ಟ ಬಂದರೂ ಛಲ ಬಿಡದೇ ಹೋರಾಡುತ್ತ ಸುಖಾಂತ್ಯ ಕಂಡುಕೊಂಡವರ ಹಾಡು..ಪಾಡು ಇದು. ಇಂದೆಲ್ಲ ಆಪ್ತ ಸಮಾಲೋಚನೆ ಲಭ್ಯವಿದೆ. ಅಂದು ಹಿರಿಯರ ಹಿತವಚನಗಳೇ ಆ ಕೆಲಸ ಮಾಡುತ್ತಿದ್ದವು. ಅಲ್ಲದೇ ಮನೆಯಲ್ಲೇ ಸಂಸಾರವೆಂಬ ನದಿಯನ್ನು ಅತೀವ ಕಷ್ಟಕಾಲದಲ್ಲೂ ಈಸಿ ಜೈಸಿದ ಪಾತ್ರಗಳ ಉದಾಹರಣೆ ಇರುತ್ತಿತ್ತು. ಹೊಂದಾಣಿಕೆ, ಪ್ರೀತಿ, ಅನುಬಂಧಗಳು ಮುಖ್ಯ ಪಾತ್ರ ವಹಿಸುತ್ತಿದ್ದವು. ಇದೇ ಶಬ್ದಗಳು ಇಂದಿಗೂ ನಮ್ಮ ಸುತ್ತೆಲ್ಲ ವ್ಯಾಪಿಸಿವೆ. ಆದರೆ ಅವುಗಳು ವ್ಯಾಪ್ತಿ, ಗ್ರಹಿಕೆ ಬದಲಾಗಿದೆ. ಕಾಲಕ್ಕೆ ತಕ್ಕಂತೆ..
ಉಕ್ಕು ಬಂದಾಗ ಸೊಕ್ಕಬಾರದು. ಪ್ರವಾಹಕ್ಕೆ ಎದುರಾಗಿ ಎದೆ ಸೆಟೆಸಿ ನಿಲ್ಲಬಾರದು. ವಿನೀತರಾಗಿ ಬಾಗಿ ಸಂದರ್ಭವನ್ನು ಗೆಲ್ಲಬೇಕು. ಹೊಂದಾಣಿಕೆಯಲ್ಲೇ ಬಾಳಿನ ಸಾರ್ಥಕತೆ ಅಡಗಿದೆ. ಅದರೊಂದಿಗೆ ಋಣಪರಿಹಾರವೂ ಜೀವನದಲ್ಲಿ ನಿರಾಳತೆಯನ್ನು ತಂದುಕೊಡುತ್ತದೆ. ಕಳವಳದ ಬದುಕಿಗೆ ಬಿಡುಗಡೆ ನೀಡಿ ಇಹಕ್ಕೂ ಪರಕ್ಕೂ ಸಾಧನವಾಗುತ್ತದೆ. ಅಂತೂ ಇಂತೂ ಹೇಗೊ ಈಸಿ ದಡ ಸೇರುವುದು ಜೀವನ ಯಾನದಲ್ಲಿ ಬಹು ಮುಖ್ಯವಾಗುತ್ತದೆ. ಸಂಗಾತಿ ಎಂಬ ದಡ ನಮ್ಮನ್ನು ಬಾಳಿನ ಪಯಣದುದ್ದಕ್ಕೂ ಭಾವ ಬಂಧನದಲ್ಲಿ, ಪ್ರೇಮ ಸಿಂಚನದಲ್ಲಿ ಹಿತವಾಗಿ ಮೀಯಿಸುತ್ತ ಜೀವನವನ್ನು ಸಹ್ಯವಾಗಿಸುತ್ತದೆ. ಕೆಲವೊಮ್ಮೆ ಬದುಕಲು ಕಾರಣವೂ ಆಗಬಹುದು. ಎಷ್ಟೇ ಕಷ್ಟವಿದ್ದರೂ ಆನಂದ ಕಾಣುವುದು ನಮ್ಮ ಪಾಲಿನ ನಕ್ಷತ್ರಗಳು ನಕ್ಕಾಗ.. ಅರಳಿ ಬೆಳಕು ಸೂಸಿದಾಗ. ಒಮ್ಮೊಮ್ಮೆ ಅವೇ ಬದುಕಲು ಪ್ರೇರಣೆಯಾಗುವುದೂ ಉಂಟು. ಏನೇ ಆದರೂ ಪರಿಧಿ ಬಾಳಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವರ್ತುಲ ಬೇರೆಬೇರೆ ಕ್ಷೇತ್ರಗಳಲ್ಲಿದ್ದರೂ ಸಂಸಾರದ ಪರಿಧಿ ಬಲುಮುಖ್ಯವಾಗಿ ಹೆಣ್ಣಿಗೆ ಅನ್ವಯಿಸುತ್ತದೆ. ‘ಮನೆ ಗೆದ್ದು ಮಾರು ಗೆದೆ’ ಎಂಬ ನುಡಿಯಂತೆ ಸಂಸಾರದ ಪರಿಧಿಯನ್ನು ಸುತ್ತಿ ಗೆದ್ದು ನಂತರ ಇತರ ಕ್ಷೇತ್ರಗಳಲ್ಲಿ ಮೇಲೇರುವುದೇ ಸರಿಯಾದ ಮಾರ್ಗ.
ಹೆಜ್ಜೆಯ ಮೇಲೆ ಹೆಜ್ಜೆಗಳನ್ನಿಡುತ್ತಾ ಬಾಳಲು ಕಲಿಯುವ ಮನುಜನಿಗೆ ಸತ್ಯದ ದಾರಿಯಲ್ಲಿ ಹೆಜ್ಜೆಗಳನ್ನಿಡುವುದು ಕಷ್ಟಸಾಧ್ಯ. ಸತ್ಯವ್ರತನಾಗುವುದು.. ಗಾಂಧೀಜಿಯನ್ನನುಸರಿಸುವುದು ಮಹಾಕಷ್ಟ. ಸತ್ಯಪ್ಪನ ಸಾವಿರ ಹೆಜ್ಜೆಗಳು ತಮ್ಮ ಗುರುತನ್ನು ಮೂಡಿಸುವಂತೆ ಅವುಗಳನ್ನು ಅನುಸರಿಸಿ ನಡೆದರೆ ಒಳ್ಳೆಯ ಹೆಜ್ಜೆಗಳು ಸಾವಿರ ಸಾವಿರವಾಗಿ ಮನುಕುಲಕ್ಕೆ ಬೆಳಕಾಗಬಹುದು. ನಿಷ್ಠೆಯಿಂದ.. ಪ್ರೇಮದಿಂದ.. ಸಮರ್ಪಣೆಯಿಂದ ಯಾವ ಕೆಲಸ ಮಾಡಿದರೂ ಸಫಲತೆ ಕಟ್ಟಿಟ್ಟ ಬುತ್ತಿ. ಬದುಕಿನ ಬೀಜಾಂಕುರವಾಗುವುದು ಅಲ್ಲಿಯೇ. ಆದರೆ ಜೀವನ ಪ್ರವಹಿಸುವ ನದಿಯ ರೀತಿಯಲ್ಲಿ ಸಾಗಿ ಮಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮನುಜ ಬೇರಿಗೆ.. ತನ್ನ ಊರಿಗೆ ಅಂಟಿಕೊಳ್ಳುವುದು ಕಡಿಮೆ. ಹೊಟ್ಟೆಬಟ್ಟೆಗಾಗಿ.. ದುಡ್ಡಿಗಾಗಿ.. ಅಭಿವೃದ್ಧಿಗಾಗಿ ಗುಳೆ ಹೊರಡುವುದು ಆದಿಯಿಂದಲೂ ಸಾಗಿ ಬಂದಿದೆ. ಅದು ಸುತ್ತುತ್ತ ಎಲ್ಲಿ ಕೊನೆಗಾಣುವುದೋ ಯಾರಿಗೂ ಗೊತ್ತಿಲ್ಲ. ಮನುಜನ ಎಲ್ಲ ಪ್ರಕ್ರಿಯೆಗಳಿಗೆ ಮನಸ್ಸೇ ಕಾರಣವಾದಾಗ ದೇಹದಂತೆ ಮನವೂ ಕಾಯಿಲೆಯಿಂದ ಬಳಲಬಹುದು. ನಮ್ಮ ಮೆದುಳಿನಿಂದ ಅಳಿದ ಪುಟಗಳು ಬದುಕಿನ ದಾರಿಯಿಂದ ರೋಗಿಯನ್ನಷ್ಟೇ ಅಲ್ಲ.. ಸುತ್ತಲಿನವರನ್ನೂ ವಿಮುಖರನ್ನಾಗಿ ಮಾಡಬಹುದು. ಹ್ಞಂ..ಬರೀ ನಶ್ವರತೆಯಷ್ಟೇ ಅಲ್ಲ.. ಈ ಬದುಕಿನಲ್ಲಿ ಹವಳ ಮುತ್ತುಗಳೂ ತುಂಬಿವೆ. ತಮ್ಮ ದರ್ಪ, ದೊಡ್ಡಸ್ತಿಕೆ ಉಳಿಸಿಕೊಳ್ಳಲು ಮಕ್ಕಳ ಬಾಳನ್ನು ಬಲಿ ಕೊಡುವ ತಂದೆಯರೂ ಇದ್ದಾರೆ. ಶ್ರೀಮಂತಿಕೆ, ಒಣ ಆಡಂಬರಗಳೆನ್ನುವ ಕಪ್ಪೆಚಿಪ್ಪಿನಲ್ಲಿ ಬಿದ್ದರೂ ಒಮ್ಮೊಮ್ಮೆ ಸ್ವಾತಿಯ ಹನಿ ಮುತ್ತಾಗುತ್ತದೆ. ‘ಸ್ವಾತಿಮುತ್ತು’ ಎಂಬ ಹೆಸರಿನಲ್ಲಿ ನೋವು ನುಂಗಿ ನಗು ಚೆಲ್ಲುತ್ತ ಬೆಳಕು ಕೊಡುವ ದೀಪವಾಗುತ್ತದೆ.
ನನ್ನ ಹದಿನಾರನೆಯ ಕೃತಿಯಾಗಿ “ದಡ” ಹೊರಬರುತ್ತಿದೆ

ತಿರುವುಗಳು ೨ ಮಿನಿ ಕಾದಂಬರಿಗಳ ಸಂಕಲ

ಪರಿವಿಡಿ

೧ ತಿರುವುಗಳು
೨ ವಾಸ್ತವ

ತಿರುವುಗಳು ೨ ಮಿನಿ ಕಾದಂಬರಿಗಳ ಸಂಕಲದ ಸಾರಾಂಶ :

ಲೇಖಕಿಯ ಮಾತು
ಬಾಳ ದಾರಿಯಲ್ಲಿ ಅದೆಷ್ಟೊಂದು ತಿರುವುಗಳು.. ಈ ತಿರುವುಗಳಲ್ಲಿ ಸಾಗುವುದು ಮಹಾಕಷ್ಟ. ಹಿಂದಿನ ಹಾದಿ ಮುಗಿದುಬಿಟ್ಟಿರುತ್ತದೆ. ಮುಂದಿನ ದಾರಿ ಕಾಣುವುದಿಲ್ಲ. ಅದೊಂದು ಬಗೆಯ ಸಂದಿಗ್ಧ ಪರಿಸ್ಥಿತಿ. ಹೌದು.. ಬದುಕು ಸರಳ ರೇಖೆಯಲ್ಲ. ತಿರುವುಗಳು ತುಂಬಿದ ದಾರಿ. ಅವುಗಳಲ್ಲಿ ಸಾಗಲೇಬೇಕು. ಬಂದಿದ್ದನ್ನು ಸ್ವೀಕರಿಸಬೇಕು. ಒಳ್ಳೆಯದೋ..ಕೆಟ್ಟದ್ದೋ ಪಾಲಿಗೆ ಬಂದದ್ದು ಪಂಚಾಮೃತ. ಈ ತಿರುವುಗಳು ನಮ್ಮ ಭಾಗ್ಯವನ್ನೇ ಬದಲಿಸಿ ಎತ್ತರಕ್ಕೇರಿಸಬಲ್ಲವು. ಅಲ್ಲಿಂದ ಪ್ರಪಾತಕ್ಕೂ ಉರುಳಿಸಬಲ್ಲವು. ಆಯ್ದುಕೊಳ್ಳುವಾಗ ಹುಶಾರಾಗಿರಬೇಕು. ಆಯ್ಕೆಯೇ ಇಲ್ಲದಾಗ ದೇವರಿಚ್ಛೆ ನಡೆಯುತ್ತದೆ.
ಗೌರಿ ಎಂಬ ಸುಂದರ ಮುಗ್ಧೆ. ಜೀವನದ ತಿರುವುಗಳ ಕೈಗೆ ಸಿಕ್ಕು ಬಳಲಿ ಬೆಂಡಾದರೂ ಎದೆಗುಂದಲಿಲ್ಲ. ಅವು ಅವಳಿಗೆ ಹೊಸ ಊರು, ಭಾಷೆಗಳನ್ನು ತೋರಿಸಿದವು. ಬೇರೆ ಬೇರೆ ತರದ ಮನುಷ್ಯರು..ಅವರ ವಿಚಿತ್ರ..ವಿಭಿನ್ನ ಸ್ವಭಾವಗಳು.. ಗುಣಾವಗುಣಗಳು.. ಅನಾವರಣವಾದವು. ಒಂದೊಂದು ನೆಲೆಯಲ್ಲೂ ಅವಳಿಗೆ ಹೊಸ ಜಗತ್ತಿನ ಪರಿಚಯವಾಗುತ್ತಿತ್ತು. ಪ್ರೀತಿಸುವ.. ಸಂಶಯಿಸುವ.. ಗೌರವಿಸುವ.. ದುಡಿಸಿಕೊಳ್ಳುವ ಮುಖಗಳು. ಕೆಲವು ನೇರವಾಗಿ ಮಾತನಾಡಿದರೆ ಉಳಿದವು ಮುಖವಾಡ ತೊಟ್ಟಿದ್ದವು. ಅನೇಕ ತಿರುವುಗಳಲ್ಲಿ ಓಡಾಡಿಸಿ ದಣಿಸಿ ವಿಧಿ ಅವಳಿಗೆ ಕಳೆದುಕೊಂಡಿದ್ದನ್ನು.. ಹುಡುಕುತ್ತಿದ್ದುದನ್ನು ದೊರಕಿಸಿಕೊಟ್ಟಿತು. ಆದರೆ ಪ್ರಸಾದ ಎಂಜಲಾಗಿತ್ತು. ಕಪಿಮುಷ್ಟಿಯಲ್ಲಿ ಸಿಲುಕಿತ್ತು. ಎಲ್ಲ ತೊರೆದು ಯಾವುದೇ ತಿರುವುಗಳಿದ್ದರೂ ಎದುರಿಸುವ ಧೈರ್ಯ ಮಾಡಿ ಹೊರಟವಳಿಗೆ ಬಯಸಿದ ನೆಲೆ ದೊರಕಿತ್ತು.
ವಾಸ್ತವ.. ಕನಸು ಎರಡೂ ಬಹುಶಃ ವಿರುದ್ಧವಾಗುವುದೇ ಜಾಸ್ತಿ. ಅದೃಷ್ಟವಂತರಲ್ಲಿ ಮಾತ್ರ ಎರಡೂ ಒಂದೇ ಆಗಿರಬಲ್ಲುದು. ಅದರಲ್ಲೂ ಹರಯದ ಕನಸಿನ ಬಾಬತ್ತೇ ಬೇರೆ. ಪ್ರೀತಿ.. ಪ್ರೇಮ.. ಸಂಭ್ರಮ.. ತುಂಬಿದ ಮನಗಳಿಗೆ ಜಾತಿ.. ಸಮಾಜದ ಕಟ್ಟುಪಾಡುಗಳು..ತಂದೆತಾಯಿಯರ ತೊಂದರೆಗಳು.. ಅವರ ಭಾವನೆಗಳು ಪ್ರಮುಖವಾಗುವುದೇ ಇಲ್ಲ. ಯೌವನದ ಹುರುಪು ಮುಂದಿರುವ ದಾರಿಯೆಲ್ಲ ಹೂವು ತುಂಬಿದ್ದೇ ಎಂದು ಭಾವಿಸುತ್ತದೆ. ಅವು ವಾಸ್ತವಕ್ಕೆ ಮುಖಾಮುಖಿಯಾದಾಗ ಸತ್ಯದರ್ಶನವಾಗುತ್ತದೆ. ಆಗ ಅದೆಷ್ಟು ಕನಸುಗಳು ನಿಜವಾಗುತ್ತವೋ ದೇವರೇ ಬಲ್ಲ. ಪ್ರೇಮಿಸಿ ವಿವಾಹವಾಗುವುದು ದೊಡ್ಡದಲ್ಲ. ಅದನ್ನು ಜೀವನಪೂರ್ತಿ ನಿಭಾಯಿಸುವುದು ದೊಡ್ಡ ವಿಷಯ. ಅರಿತು ಬಾಳುವುದು ಮುಖ್ಯ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪರಸ್ಪರರಿಗೆ ಆಸರೆಯಾಗುವುದೇ ಸಂಸಾರ. ವಾಸ್ತವವನ್ನು ಒಪ್ಪಿಕೊಂಡು ಬಾಳಿದರೆ ಬಾಳು ಬೆಳಗಬಲ್ಲುದು.
ಇವು ನನ್ನ ಮೊದಲ ಮಿನಿ ಕಾದಂಬರಿಗಳು. ಈ ಎರಡೂ ಮಿನಿ ಕಾದಂಬರಿ

ಆಕ್ರಮಣ ಕಥಾ ಸಂಕಲನದ

ಪರಿವಿಡಿ

೧) ಆಕ್ರಮಣ
೨) ಸ್ಥಿತ್ಯಂತರಗಳು
೩) ಕಳೆದುಕೊಂಡದ್ದು…
೪) ದಾನೆ ದಾನೆ ಪೆ ಲಿಖಾ ಹೈ…
೫) ನಾವಿಕ
೬) ಪ್ರಾಯಶ್ಚಿತ್ತ
೭) ಪವಾಡ
೮) ಬಿದ್ದ ಮುತ್ತುಗಳ ಆಯುವುದೆ…
೯) ಪರಿಹಾರ
೧೦) ಸೋತು ಗೆದ್ದವಳು
೧೧) ಹತ್ಯೆ
೧೨) ಅರಿವು
೧೩) ಹೊಸ ಅಜ್ಜಿಯರ ಹಳೆ ಹಾಡು
೧೪) ಪಲ್ಲಟ
೧೫) ಸ್ವಾರ್ಥ
೧೬) ಚಿತ್ತೀ ಫಲ

ಆಕ್ರಮಣ ಕಥಾ ಸಂಕಲನದ ಸಾರಾಂಶ

ಲೇಖಕಿಯ ಮಾತು

ಆಕ್ರಮಣ.. .. ..ಇಂದು ಮೈ, ಮನಸುಗಳ ಮೇಲಷ್ಟೇ ಅಲ್ಲ ಸಂಸ್ಕೃತಿಯ ಮೇಲೂ ನಡೆದು ನಮ್ಮ ಸಂಸ್ಕೃತಿಯ ಚಿತ್ರ ವಿರೂಪವಾಗುತ್ತಿದೆ. ನಾವು ಇದನ್ನು ನೋಡಿಯೂ ನೋಡದವರಂತಿದ್ದೇವೆ. ಬಾಳಿನಲ್ಲಿ ನಡೆಯುವ ಅನೇಕ ಸ್ಥಿತ್ಯಂತರಗಳು ನಮ್ಮನ್ನು ಕಣ್ಣು ತೆರೆಸುವಂತೆ, ಗತಿಸಿದ್ದಕ್ಕಾಗಿ ಪರಿತಪಿಸುವಂತೆ ಮಾಡುತ್ತವೆ. ಮನದ ಗೋಡೆಗಳ ಗಡಿ ಮೀರಿದಾಗಲೇ ಬದುಕಿನ ನಿಜವಾದ ಅರ್ಥ ತಿಳಿಯುವದು. ಮಾಯಾಮೃಗದಂತೆ ಕಂಡಿದ್ದನ್ನೆಲ್ಲ ಬೆನ್ನಟ್ಟುವ ಭರದಲ್ಲಿ ಜೀವನದಲ್ಲಿ ಅನೇಕ ಸಂಗತಿಗಳನ್ನು ಕಳೆದುಕೊಂಡಿದ್ದರ ಅರಿವಾಗುವದಿಲ್ಲ. ಆದರೆ ಎಲ್ಲ ಲೆಕ್ಕ ಆ ದೇವನಲ್ಲಿರುತ್ತದೆ. ತಿನ್ನುವ ಪ್ರತಿ ಕಾಳಿನ ಮೇಲೂ ತಿನ್ನುವವರ ಹೆಸರು ಬರೆದಂತೆ ಕೂಡಿಸಿಟ್ಟ ಕಾಸು ಯಾರಿಗೆ ಸೇರಬೇಕೆಂಬ ಲೆಕ್ಕವೂ ಅವನದೇ. ಎನೇ ಆದರೂ ಭವ ದಾಟಿಸುವ ನಾವಿಕನಲ್ಲಿ ನಂಬಿಕೆ ಇಟ್ಟು ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು.
ಪಾಪಕ್ಕೆ ಪ್ರಾಯಶ್ಚಿತ್ತದ ನಂತರವೇ ತುಸು ಸಮಾಧಾನ ದೊರೆಯಲು ಸಾಧ್ಯ. ಮತ್ತೊಬ್ಬರ ನೋವಿಗೆ ಮರುಗಿದಲ್ಲಿ ಮಾನವ ಪವಾಡವನ್ನೇ ಮಾಡಬಹುದು. ಸ್ನೇಹವೆಂಬ ಸರವನ್ನು ವಿಶ್ವಾಸವೆಂಬ ಮುತ್ತುಗಳಿಂದ ನಂಬಿಕೆ ಎಂಬ ದಾರದಲ್ಲಿ ಪೋಣಿಸಿದರೆ ಸರ ಗಟ್ಟಿಯಾಗಿರುತ್ತದೆ. ಯಾವುದೇ ಸಮಸ್ಯೆಗೂ ಬಾಯಿ ಮಾತಿನಲ್ಲಲ್ಲ, ಮಾಡಿ ತೋರಿಸುವದೇ ನಿಜವಾದ ಪರಿಹಾರ. ಸೋತು ಗೆಲ್ಲುವದೇ ನಿಜವಾದ ಬದುಕು.
ಮನದಲ್ಲಿರುವ ಕೆಟ್ಟ ಯೋಚನೆಗಳ ಹತ್ಯೆ ಮಾಡಿದರೆ ಬಾಳು ಸುಂದರ ನಂದನ. ಈ ಅರಿವು ಮೂಡುವುದಕ್ಕೆ ತೆರಬೇಕಾದ ಬೆಲೆ ಅಪಾರ. ಬಾಳಿನ ಸಂಧ್ಯಾಕಾಲದಲ್ಲಿ ತಾತ, ಅಜ್ಜಿಯರಿಗೆ ಮೊಮ್ಮಕ್ಕಳ ತೊದಲ್ನುಡಿಗಳೇ ಚೇತನ. ಬಾಳಿನ ಚಿತ್ರಗಳಲ್ಲಿ ನಮ್ಮ ನಂಬಿಕೆಗಳು ಪಲ್ಲಟವಾದರೂ ಬಂದಿದ್ದನ್ನು ಧೈರ್ಯವಾಗಿ ಎದುರಿಸಬೇಕು. ಪ್ರಕೃತಿಯ ಚಕ್ರವನ್ನು ಚಿತ್ತೀಫಲಗಳಂತೆ ತಿರುಗು-ಮುರುಗಾಗಿಸಿದರೆ ಎಲ್ಲರಿಗೂ ಅಪಾಯ ತಪ್ಪಿದ್ದಲ್ಲ. ಅದರ ಜೊತೆಯಲ್ಲೇ ಉರುಳಿದರೆ ಜೀವನ ಸಂತುಲಿತವಾಗಿರುತ್ತದೆ.
ಆಕ್ರಮಣ ನನ್ನ ಆರನೇ ಕೃತಿಯಾಗಿ ರೂಪುಗೊಂಡಿದೆ.

ಜೀವಧಾರಾ.. ..ನಿರಂತರಾ.. .. ಕಥಾ ಸಂಕಲನದ

ಪರಿವಿಡಿ

೧. ಜೀವಧಾರಾ . . . . . ನಿರಂತರಾ . . . .
೨. ಪರಕಾಯ ಪ್ರವೇಶ
೩. ಒಪ್ಪಂದ
೪. ವಿಭ್ರಮ
೫. ಸಾಂಗತ್ಯ
೬. ವಿಧಿಯ ವಿರ‍್ಯಾಸ
೭. ಹೆರಾಸ್‌ಮೆಂಟ್
೮. ಹೊಂದಾಣಿಕೆ
೯. ದಾಹ
೧೦. ಸಾಲ ಬಾಕಿ
೧೧. ವ್ಯಾಮೋಹ
೧೨. ಗುರುದಕ್ಷಿಣೆ
೧೩. ಅಗತ್ಯ
೧೪. ಪ್ರಭು ಕಿ ಮರ್ಜಿ
೧೫. ನಾನೂ ಧೃತರಾಷ್ಟ್ರನಾಗಲಿಲ್ಲ
೧೬. ಉದಾಹರಣೆ

ಜೀವಧಾರಾ.. ..ನಿರಂತರಾ.. .. ಕಥಾ ಸಂಕಲನದ ಸಾರಾಂಶ

ಲೇಖಕಿಯ ಮಾತು

ಲೇಖಕಿಯ ಮಾತು
“ಜೀವಧಾರಾ.. ..ನಿರಂತರಾ.. ..” ಹೆಸರೇ ಸೂಚಿಸುವಂತೆ ಜೀವರಸದ ಒರತೆ. ಕೆಲವರಿಗೆ ಬದುಕು ಕಷ್ಟವಾದರೆ ಕೆಲವರಿಗೆ ಸಾವಿನ ಹೆದರಿಕೆ. ಹೀಗಾಗಿ ಬದುಕು ಸುಲಭವೋ, ಸಾವು ಸುಲಭವೋ ಎಂಬ ಜಿಜ್ಞಾಸೆ ಅವರವರ ಪರಿಧಿಗೆ ಬಿಟ್ಟದ್ದು. ಆದರೆ ಜೀವರಸ ಹರಿದು ಜೀವನ ಚಿಗುರಬೇಕಾದದ್ದು ಪ್ರಕೃತಿ ಧರ್ಮ. ಅಂಥ ಮುಗ್ಧ ಹೆಣ್ಣು ಜೀವವನ್ನು ಚಿವುಟದೇ ಮುರುಟದಂತೆ ನೋಡಿಕೊಳ್ಳುವದು ಸಮಾಜದ ಕರ್ತವ್ಯ. ಇಲ್ಲವಾದರೆ ಮುಂದಿನ ಪೀಳಿಗೆ ಹೆಣ್ಣುಗಳಿಗಾಗಿ, ವಧುಗಳಿಗಾಗಿ ಕಾತರಿಸಬೇಕಾದೀತು. ವಿದೇಶೀ ಸಂಸ್ಕೃತಿಯನ್ನು ಅನುಕರಿಸುವ ಭ್ರಮೆಯಲ್ಲಿ ವಿಭ್ರಮಕ್ಕೊಳಗಾಗಬಹುದು. ಬೇಡದ ಸಾಂಗತ್ಯ ಕುಟುಂಬವನ್ನೇ ಹಾಳು ಮಾಡಬಹುದು. ಪ್ರೀತಿ, ವಾತ್ಸಲ್ಯಗಳನ್ನೂ ಕೆಟ್ಟ ಕಣ್ಣಿನಿಂದ ನೋಡುವ ಸಂದರ್ಭ ಉಂಟಾಗಬಹುದು. ಹಣಕ್ಕಾಗಿ ನಮ್ಮತನವನ್ನೇ ಮಾರಿಕೊಳ್ಳುವ ಪ್ರಸಂಗ ಬರಬಹುದು. ಅದಕ್ಕೋಸ್ಕರ ಅನುಕರಣೆಯನ್ನು ಬಿಟ್ಟು ಜಾತಿ, ಮತ, ದ್ವೇಷಗಳನ್ನು ಮೀರಿ ನಮ್ಮ ಅಗತ್ಯಕ್ಕೋಸ್ಕರ ಹೊಂದಾಣಿಕೆ ಮಾಡಿಕೊಳ್ಳುವದೇ ಬದುಕು. ವ್ಯಾಮೋಹವನ್ನು ತೊರೆದಾಗ ಮಾತ್ರ ಅದು ಭಗವಂತನಲ್ಲಿ ಸಮರ್ಪಿತವಾಗುತ್ತದೆ. ದೇವ ತನ್ನ ಯಾವುದೇ ಸಾಲವನ್ನೂ ಬಾಕಿ ಉಳಿಸದೇ ವಸೂಲು ಮಾಡುತ್ತಾನೆ. ಗುರುದಕ್ಷಿಣೆಯನ್ನಾದರೂ ನೀಡಲೇಬೇಕು. ಉದಾತ್ತ ಸಮಾಜದ ನಿರ್ಮಾಣಕ್ಕಾಗಿ, ಮೌಲ್ಯಗಳನ್ನು ಉಳಿಸಿಕೊಳ್ಳುವದಕ್ಕೋಸ್ಕರ ತಂದೆ, ತಾಯಿಯರು ಅನೈತಿಕ ಸ್ವಾರ್ಥ ತ್ಯಜಿಸಿ ಮಕ್ಕಳನ್ನು ಬೆಳೆಸಬೇಕು. ಆಗ ಮಾತ್ರ ಧನಾತ್ಮಕ ಉದಾಹರಣೆ ಜ್ವಲಂತವಾಗಿ ನಿಲ್ಲುತ್ತದೆ. ಆಗಲೇ ಸಮಾಜಕ್ಕೆ ಉತ್ತಮ ಭವಿಷ್ಯ ಸಾಧ್ಯ.
ನನ್ನ ಐದನೇ ಕೃತಿ “ಜೀವಧಾರಾ.. ..ನಿರಂತರಾ.. ..” ಪ್ರಕಟವಾಗುವ ಮುನ್ನವೇ ಮುಂಬೈನ ಜಗಜ್ಯೋತಿ ಕಲಾವೃಂದದ ೨೦೧೪ನೇ ಸಾಲಿನ ‘ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ‘ಕಥಾ ಪ್ರಶಸ್ತಿಯನ್ನು ಪಡೆದುಕೊಂಡಿದೆ


ಜೀವನ ಚರಿತ್ರೆ