ಕಲಾಲೋಕ-ಗಣೇಶ್

ಪ್ರತಿ ವರ್ಷ ಮನೆಯಲ್ಲಿ ಮಾಡಿದ ಗಣೇಶನ ಮೂರ್ತಿಗಳು

2025 – ದಾಸವಾಳ ಹೂವಿನಲ್ಲಿ ಗಣೇಶ
2025– ದಾಸವಾಳ ಹೂವಿನಲ್ಲಿ ಗಣೇಶ್ – ಈ ಬಾರಿ ನನ್ನ ಕೈಯಲ್ಲಿ ಅರಳಿದ ಗಣಪತಿ ದಾಸವಾಳದ ಹೂವಿನಲ್ಲಿ ಕುಳಿತಿದ್ದಾನೆ.
ಚೊಚ್ಚಲು ಬಸುರಿ. ತುಂಬಿದ ಹೊಟ್ಟೆ ಹೊತ್ತು ಪ್ರತಿಬಾರಿಯಂತೆ ಉತ್ಸಾಹದಿಂದ ಗಣೇಶನಿಗೆ ಬಣ್ಣ ಕೊಡಲು ಮುಂದಾಗಿದ್ದೆ. ಅಮ್ಮ ಮೆಲ್ಲಗೆ ಕರೆದು ” ಅಲ್ಲಾ, ಗಣಪತಿ ಮಾಡಾವ್ರಿಗೆ ಗಂಡು ಮಕ್ಕಳಾಗೂದಿಲ್ಲಂತ. ಹಳೇ ಮಂದಿ ಹೇಳ್ತಾರವಾ. ಏನ ಮಾಡತೀ?” ಎಂದು ನನ್ನನ್ನೇ ನಿರುಕಿಸಿದಳು. ಕ್ಷಣ ಕಾಲ ಬೆಪ್ಪಾದೆ. ಯಾವುದಕ್ಕೋಸ್ಕರ ಉತ್ಸಾಹದಿಂದ ಕಾಯುತ್ತಿದ್ದೆನೋ ಅದಕ್ಕೆ ಕತ್ತರಿ ಹಾಕಿದಾಗ ಹೇಗಾಗಬೇಡ. ಅಷ್ಟೇ ಅಲ್ಲದೇ ತನ್ನ ಅನುಭವವನ್ನೂ ಹೇಳಿದಳು. ಯಾರ ಬಾಯಿಂದಲೋ ಕೇಳಿ ಅವಳೂ ಅಪ್ಪನಿಗೆ ದುಂಬಾಲು ಬಿದ್ದು ಒಂದು ಬಾರಿ ಗಣಪತಿ ಮಾಡುವುದನ್ನು ನಿಲ್ಲಿಸಿದಳಂತೆ. ಆಗ ನಾನಿನ್ನೂ ಚಿಕ್ಕ ಮಗು. ಅಪ್ಪ ಒಲ್ಲದ ಮನಸ್ಸಿನಿಂದ ಬಿಟ್ಟು ಹೊರಗಿನಿಂದ ಗಣೇಶನ ಮೂರ್ತಿ ತಂದಿಟ್ಟು ಪೂಜೆ ಮಾಡಿದರು. ಆದರೆ ಇಬ್ಬರೂ ಅನುಭವಿಸಿದ ಮಾನಸಿಕ ಹಿಂಸೆ ತಳಮಳ ಸಾಮಾನ್ಯವಾದದ್ದಲ್ಲ. ನಂತರ ಮನಸು ತಿಳಿಯಾಗಿತ್ತು. “ಕೊಡೋ ದೇವ್ರು ಹೆಂಗಿದ್ರೂ ಕೊಡತಾನ. ಯಾರದೋ ಮಾತು ಕೇಳಿ ಗಣಪ್ಪನ್ನ ಮಾಡೋದು ಯಾಕ ಬಿಡಬೇಕು?” ಎಂಬ ನಿರ್ಧಾರಕ್ಕೆ ಬಂದರು. ಮುಂದಿನ ಬಾರಿಯಿಂದ ಪ್ರತಿಬಾರಿಯಂತೆ ಗಣಪರು ಮನೆಮನೆಗಳಿಗೆ ತೆರಳಿ ಪೂಜೆಗೊಳ್ಳಲು ಸಿದ್ಧವಾಗಿ ಕುಳಿತರು. ಇಬ್ಬರ ಮುಖದಲ್ಲೂ ತೃಪ್ತಿ, ಸಾರ್ಥಕತೆಯ ಭಾವ. ಇದನ್ನೆಲ್ಲ ಕೇಳಿದ ನಂತರ ಒಂದು ಕ್ಷಣ ನಾನೂ ವಿಚಲಿತಳಾದೆ. ನಂತರ ” ಇರ್ಲಿ ಬಿಡು, ಆಗಿದ್ದಾಗ್ತದ.. ಗಂಡೇನು, ಹೆಣ್ಣೇನು?” ಎಂದದ್ದೇ ಬ್ರಶ್ ಕೈಗೆತ್ತಿಕೊಂಡಿದ್ದೆ. ಹುರುಪಿನಿಂದ ಗಂಟೆಯ ಕಾಲ ಕುಳಿತು ಬಣ್ಣ ಕೊಟ್ಟಾಗ ಹೊಟ್ಟೆ ಹಿಡಿದುಕೊಂಡಿತ್ತು. ಅಪ್ಪ, ಅಮ್ಮ ಇಬ್ಬರೂ ” ನೀ ಬ್ಯಾಡ ಬಿಡವಾ. ನಾವಿಬ್ಬರೂ ಹೆಂಗರೆ ಮಾಡಕೋತೇವಿ” ಎಂದು ಗಾಬರಿಯಿಂದಲೇ ಹೇಳಿದ್ದರು. ಆದರೆ ಎರಡು ನಿಮಿಷಗಳಲ್ಲಿ ಸರಿ ಹೋಗಿತ್ತು. ಆದರೆ ಜನರ ಹೇಳಿಕೆಯನ್ನು ಮೀರಿ ಗಂಡು ಮಗುವೇ ಆಗಿತ್ತು. ನಮಗೆ ಅಷ್ಟೊಂದು ವ್ಯತ್ಯಾಸ ಕಾಣದಿದ್ದರೂ ಅಮ್ಮನ ಮುಖ ಅರಳಿ ಹೂವಾಗಿತ್ತು. ಎರಡನೇ ಬಾರಿ ಬಸುರಿಯಾಗಿದ್ದಾಗ ಜನರ ಹೇಳಿಕೆ ನಿಜವಾಗಲಿ ಎಂದು ಮನಸ್ಸು ತುಡಿಯುತ್ತಿತ್ತು. ಹೆಣ್ಣು ಮಗುವಿಗಾಗಿ ಕಾಯುತ್ತಿತ್ತು. ನಾನೊಬ್ಬಳೇ ಅಲ್ಲ.. ಎಲ್ಲರೂ ಕಾಯುತ್ತಿದ್ದೆವು. ಆದರೆ ಹುಟ್ಟಿದ್ದು ಗಂಡೇ. ಅಮ್ಮ ಕೊಂಚ ನಿರಾಸೆಯಿಂದ “ಮಂದಿ ಏನೇನೋ ಹೇಳ್ತಾರ. ಖರೇ ದೇವರಿಚ್ಛಾ ಇದ್ಧಂಗ ಆಗೋದು” ಎಂದು ನಂಬಿಕೆಗಳಿಗೆ ಶರಾ ಬರೆದಳು. ಅಮ್ಮ, ಅಪ್ಪರಿಗೆ ಗಂಡು ಮಗನನ್ನು ಕೊಡದ ಗಣಪ ಅನ್ಯಾಯವೇನೂ ಮಾಡಲಿಲ್ಲ. ಒಳ್ಳೆಯ ಅಳಿಯನನ್ನು ಕೊಟ್ಟ. ಅಮ್ಮ ಕೊನೆಯಲ್ಲಿ ” ನಿನ್ನ ಯಾರು ಕೇಳ್ತಾರ? ನನ್ನ ಅಳಿಯಾ ಹೇಳಲಿ” ಎನ್ನುವಷ್ಟು ಗಟ್ಟಿಯಾದಳು. ” ಹೂವಿನ್ಹಾಂಗ ಇಟಗೊಂಡಾರ” ಎನ್ನುತ್ತಿದ್ದಳು. ಅದಕ್ಕೇನೋ ಗೊತ್ತಿಲ್ಲ. ಈ ಬಾರಿ ನಮ್ಮ ಗಣಪ ತನ್ನ ಪ್ರೀತಿಯ ದಾಸವಾಳದ ಹೂವಿನಲ್ಲಿ ಕುಳಿತಿದ್ದಾನೆ. ‘ಭಕ್ತರನ್ನು ಹೂವಿಂತೆ ಪಾಲಿಸು’ ಎಂದು ಬೇಡಿಕೊಳ್ಳುತ್ತೇನೆ. ಎಂದಿನಂತೆ ಮಣ್ಣು, ಬ್ರಶ್ ಹಿಡಿದಾಗ ಅಪ್ಪ ನೆನಪಾಗುತ್ತಾರೆ. ನನ್ನ ಮನದಲ್ಲಿ ನಿಂತು ತಾನೇ ಮಾಡಿಸಿಕೊಂಡು ನನಗೆ ಶ್ರೇಯ ಕೊಡುವ ಗಣೇಶನಿಗೆ ನಮೋ ಎನ್ನುತ್ತೇನೆ.
ಮಧುರಾ (ಅಲಕಾ) ಕರ್ಣಮ್ 

2024 -ಅಯೋಧ್ಯೆ ರಾಮರೂಪಿ ಗಣೇಶ
2024 -ಅಯೋಧ್ಯೆ ರಾಮರೂಪಿ ಗಣೇಶ್ ಗಣೇಶನ ಹಬ್ಬವೆಂದರೆ ನನಗೆ ಹಳೆಯ ನೆನಪುಗಳ ಮೆರವಣಿಗೆ. ಗೌರಿ ಹಬ್ಬದ ದಿನವೇ ಸುಮಾರು ಅರವತ್ತರಿಂದ ಎಪ್ಪತ್ತು ಗಜಮುಖರು ಸಾಲಾಗಿ ಹಿಂದೆ ತಮ್ಮ ತಮ್ಮ ಮಾಲೀಕರ ಹೆಸರುಗಳನ್ನು ಹಿಂದೆ ಬರೆದುಕೊಂಡು ಕುಳಿತಿರುತ್ತಿದ್ದರು. ಎಲ್ಲಾ ಒಂದೇ ಬಗೆ.. ಬಣ್ಣದಲ್ಲೂ ಬೇರಿಲ್ಲ. ಎಲ್ಲರೂ ಕೆಂಪು ಬಣ್ಣದ ಮಡಿ ಉಟ್ಟು ಜರತಾರಿ ಶಲ್ಯ ಹೊದ್ದು ಪೂಜೆಗೆ ತಮ್ಮ ಗಮ್ಯ ಸ್ಥಳಗಳಿಗೆ ತೆರಳಲು ಸಜ್ಜಾಗಿ ಶಿಸ್ತಿನ ಸಿಪಾಯಿಗಳಂತೆ ತೋರುತ್ತಿದ್ದರು. ಸೋದರ ಮಾವ ಮಧು ಮಾಮಾ ” ನಾ ಫೌಂಡರ್ ಮೆಂಬರ್ ನಿಮ್ಮ ಗಣಪತಿಗೆ. ಮದ್ಲಿಂದ ತೊಗೊಳ್ಲಿಕ್ಕತ್ತೇನಿ. ನಮ್ಮ ಗಣಪತಿಗೆ ಬ್ಯಾರೇ ಏನರೇ ಮಾಡು” ಎಂದು ನನಗೆ ಹೇಳುತ್ತಿದ್ದ. ಅವನ ಗಣೇಶನಿಗೆ ಇನ್ನೊಂದು ಸರ ಹೆಚ್ಚಿಗೆ ಹಾಕಿ ಒಳಗಿಡುತ್ತಿದ್ದೆ. ಮಧ್ಯಾಹ್ನದಿಂದಲೇ ಜನರ ಗಲಾಟೆ ಆರಂಭ. ಗುಂಪು ಗುಂಪಾಗಿ ಬರುವವರ ಮಧ್ಯೆ ಯಜಮಾನರು ಟೋಪಿ ತೊಟ್ಟು ಹೆಗಲ ಮೇಲೊಂದು ಶಲ್ಯ ಹೊದ್ದು ತಟ್ಟೆಯಲ್ಲಿ ಕುಂಕುಮ, ಅಕ್ಷತೆ ಇಟ್ಟುಕೊಂಡು ಬಂದು ತೆಗೆದುಕೊಂಡು ಹೋಗುತ್ತಿದ್ದರು. “ಗಣಪತಿ ಬಪ್ಪಾ ಮೋರಯಾ” ಎಂಬ ಕೂಗಿನ ಜೊತೆ ಪಟಾಕಿಗಳು ಚಟಪಟ ಸಿಡಿಯುತ್ತಿದ್ದವು. ಅಪ್ಪ, ಅಮ್ಮನೊಂದಿಗೆ ನನಗೂ ಬಿಡುವಿಲ್ಲದ ಕೆಲಸ. ಅಪ್ಪ ಸೋನೇರಿ ಬಣ್ಣದ ಪೇಪರ್ ನಿಂದ ತ್ರಿಶೂಲ, ಪಾಶ ಹೆಚ್ಚಿಗೆ ಮಾಡಿಡುತ್ತಿದ್ದರು. ” ನಮ್ಮ ತ್ರಿಶೂಲ ಹಾದ್ಯಾಗ ಬಿತ್ರಿ” ಎಂದು ಓಡಿ ಬರುವವರಿದ್ದರಲ್ಲ. ಎಲ್ಲ ಖಾಲಿಯಾದಾಗ ಮಾತ್ರ ಬಿಕೋ ಎನಿಸುತ್ತಿತ್ತು. ಸುಮಾರು ನಾಲ್ಕು ತಿಂಗಳ ಸಡಗರ ಸಂಭ್ರಮ ಒಮ್ಮೆಲೆ ಮುಗಿದು ಹೋದಂತೆ. ಕೊನೆಗೆ ನಮ್ಮ ಗಣೇಶನಿಗೆ ಡೆಕೊರೇಷನ್ ಮಾಡುವಷ್ಟು ವ್ಯವಧಾನ, ತಾಳ್ಮೆ ಎರಡೂ ಇರುತ್ತಿರಲಿಲ್ಲ. ನಮ್ಮ ಗಣೇಶ ಸರಳವಾಗಿಯೇ ಪೂಜೆಗೊಳ್ಳುತ್ತಿದ್ದ. ಜೀವನವೇ ಹಾಗೆ. ಅದೆಷ್ಟು ಸಡಗರ.. ಸಂಭ್ರಮ.. ಹಾರಾಟ. ಇದೇ ನಮ್ಮನ್ನು ಜೀವನ್ಮುಖಿಯಾಗಿಸುತ್ತದೆ. ಗಣೇಶ ಭಕ್ತಿ, ಕಲೆ, ಜೀವನೋತ್ಸಾಹ ಮುಂತಾದವುಗಳ ಸಂಗಮ. ನಾನು ಪ್ರತಿ ಬಾರಿ ಬೇರೆ ಬೇರೆ ರೂಪಗಳಲ್ಲಿ ವಿನಾಯಕರನ್ನು ಮಾಡುವುದನ್ನು ನೋಡಿದ್ದರೆ ಅಪ್ಪ ಎಷ್ಟು ಖುಷಿ ಪಡುತ್ತಿದ್ದರೋ ಏನೋ. ಈ ಬಾರಿ ಅಯೋಧ್ಯೆಯ ಬಾಲರಾಮನ ರೂಪ ತಳೆದು ಕೈಯಲ್ಲಿ ಬಿಲ್ಲು ಬಾಣ ಹಿಡಿದು ಬಂದಿದ್ದಾನೆ ನಮ್ಮ ಗಣೇಶ. ಒಬ್ಬ ಗಣೇಶನಿಗೆ ಹೊಳಪುಳ್ಳ ಕಣ್ಣು ಬರೆಯಲು ನಾನೆಷ್ಟು ಕಷ್ಟ ಪಡುತ್ತೇನೆ. ಅಪ್ಪ ಅಷ್ಟು ಮೂರ್ತಿಗಳಿಗೆ ಹೇಗೆ ಬರೆಯುತ್ತಿದ್ದರೋ ಎನಿಸುತ್ತದೆ. ಯಥಾಪ್ರಕಾರ ಮತ್ತೆ ಹಳೆಯ ದಿನಗಳ ಅನುಸಂಧಾನದೊಂದಿಗೆ.. ನೆನಪುಗಳ ಎರಡು ಹನಿಗಳೊಂದಿಗೆ ಮುಕ್ತಾಯವಾಗುತ್ತದೆ. ತಾನೇ ತಾನಾಗಿ ನನ್ನ ಕೈಯಲ್ಲಿ ಅರಳಿ ನಾನು ಮಾಡಿದೆನೆಂಬ ಅಹಂಭಾವ ಕೊಡುವ ಗಣಪತಿಗೆ ನಮೋನ್ನ. ಮಧುರಾ (ಅಲಕಾ) ಕರ್ಣಮ್ 

2023 -ಚಂದ್ರಯಾನ ಗಣೇಶ
2023 -ಚಂದ್ರಯಾನ ಗಣೇಶ ಚಂದ್ರಯಾನ ಗಣಪನ ಕೈಯಲ್ಲಿ ವಿಕ್ರಮ ಲ್ಯಾಂಡರ್ ಮತ್ತು ರೋವರ್ ಮತ್ತೆ ಬಂದಿದ್ದಾನೆ ಗಣಪ. ವರಗಳೊಂದಿಗೆ ನನಗೆ ಹಳೆಯ ನೆನಪುಗಳನ್ನು ಮೊಗೆಮೊಗೆದು ಕೊಡುವವ. ಅಪ್ಪನ ನೆನಪಿಗೆ ಬಣ್ಣ ಬಳಿಯುವವ. ನಗುತ್ತಾ ನಿಂತು ಮಾಡಿಸಿಕೊಳ್ಳುವವ. ನಾನು ಮಾಡಿದೆನೆಂಬುದು ಸುಳ್ಳು. ಅವ ತನ್ನಿಷ್ಟದಂತೆ ತಾನೇ ಮೂಡಿ ಬರುತ್ತಾನೆಂಬುದು ಅಪ್ಪಟ ಸತ್ಯ. ಬದುಕು ಪ್ರಯೋಗಗಳ ಆಗರ. ಬರೀ ವಿಜ್ಞಾನದಲ್ಲಷ್ಟೇ ಅಲ್ಲ.. ನಮ್ಮ ನಿತ್ಯ ಜೀವನದಲ್ಲೂ ಒಂದಿಲ್ಲೊಂದು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಗಣಪತಿಯನ್ನು ಮಾಡಲು ಮೊದಲು ಅಪ್ಪ ಹಳದಿ ಬಣ್ಣದ ಶೇಡು ಎಂದು ಕರೆಯಲ್ಪಡುವ ಮಣ್ಣು ತರುತ್ತಿದ್ದರು. ಅದರಲ್ಲಿ ಹತ್ತಿಯನ್ನು ಸೇರಿಸಿ ಕುಟ್ಟಿ ಹದ ಮಾಡುವುದು ಅಮ್ಮನ ಕೆಲಸ. ಅದರಲ್ಲಿ ಅಂಟಿನ ಅಂಶ ಕಡಿಮೆ. ಅಂದಿನ ಸಮಾಜವೂ ಹಾಗೇ ಇತ್ತಲ್ಲ. ಆಗಾಗ ಸಂಬಂಧಗಳನ್ನು ಹದ ಮಾಡುತ್ತಲೇ ಆಪ್ತವಾಗಿಸುತ್ತಿತ್ತು. ನಂತರ ಗುಜರಾಥಿ ಮಿಟ್ಟಿ.. ಮನೆಗೆ ಬಂತು. ಅದೂ ಪಾವ್ ಕಿಲೊ… ಅಂದರೆ ಕಾಲು ಕೆ.ಜಿ.ಯಷ್ಟು ಮಾತ್ರ. ಕಾರಣ ” ಭಾಳ ತುಟ್ಟಿ ಮಣ್ಣು” ಎಂಬ ಉದ್ಗಾರ. ಆದರೆ ಬಹಳ ಒಳ್ಳೆಯ ಸಿಮೆಂಟಿನ ಬಣ್ಷದ ಮಣ್ಣು. ” ಕಲಸಿದ್ರ ಬೆಣ್ಣಿ ಹಂಗ ನೋಡು. ಹೆಂಗ ಬೇಖಾಧಂಗ ಹೊಳ್ಳತದ” ಎಂಬ ಅನಿಸಿಕೆ ಅಪ್ಪನದು. ಆಗ ಚಿನ್ನ ಸಿಕ್ಕಂತಾಗಿದ್ದು ಸುಳ್ಳಲ್ಲ. ಗಣಪ್ಪನಿಗೆ ಆಭರಣಗಳು ಅದರಿಂದಲೇ ತಯಾರಾದವು. ಕಾಲಕ್ರಮೇಣ ದೊಡ್ಡ ಚೀಲದ ತುಂಬ ಅದೇ ಮಣ್ಣು ಬಂದಿತು. ಅಮ್ಮನಿಗೆ ಖುಷಿಯೋ ಖುಷಿ. ಕುಟ್ಟಿ ಹದ ಮಾಡುವ ಕೆಲಸ ತಪ್ಪಿತ್ತು. ಈಗ ಬರೀ ಕಲಸಿಟ್ಟರಾಯಿತು.ನಂತರ ನಮಗೊಂದು.. ನಿಮಗೊಂದು ಎಂದು ಬೇಡಿಕೆಗಳು ಹೆಚ್ಚಿದವು. ಕೈಯಲ್ಲಿ ಮಾಡುವುದು ಸಾಧ್ಯವಿಲ್ಲವೆನಿಸಿದಾಗ ಅಚ್ಚು ಬಂದು ಗಣೇಶ ಸ್ವಲ್ಪ ಈಝಿ..ಯಾದ. ಅದೂ ಪ್ರಯೋಗವೇ. ದೇಹ ಚೆನ್ನಾಗಿ ಬಂದರೂ ಕೈ..ಕಾಲುಗಳು ಸರಿಯಾಗಿ ಬರಲಿಲ್ಲ. ಅವನ್ನು ಬೇರೆಯೇ ಮಾಡತೊಡಗಿದೆವು. ನಾನೂ ಅಚ್ಚು ಹಾಕುವುದನ್ನು ಕಲಿತೆ. ತೀಡುವುದೂ.. ಮುಖ್ಯ ಬಣ್ಣಗಳನ್ನು ಕೊಡುವುದೂ ಅಪ್ಪನ ಕೆಲಸ. ಉಳಿದದ್ದೆಲ್ಲ ನಾನೂ.. ಅಮ್ಮ ಮಾಡುತ್ತಿದ್ದೆವು. ಏನೇ ಮಾಡಿದರೂ ಸಾಮಾನ್ಯವಾಗೇ ಕಾಣುತ್ತಿದ್ದ ಗಣಪ ಸೋನೇರಿ .. ಬಂಗಾರದ ಬಣ್ಣ ಕೊಟ್ಟ ಮೇಲೆ ರಾಜಾಧಿರಾಜನಂತೆ ಕಂಗೊಳಿಸುತ್ತಿದ್ದ. ಅಪ್ಪನೇ ಸೋನೇರಿ ಕೊಡುತ್ತಿದ್ದರು. ಅಂದಿನ ಪದ್ಧತಿಯಂತೆ ಆಭರಣಗಳಿಗೆಲ್ಲ ಮೊದಲು ಕೆಮ್ಮಣ್ಣು.. ಅಥವಾ ಹುರಮಂಜು ಕಲೆಸಿ ಹಚ್ಚಲಾಗುತ್ತಿತ್ತು. ಸೊನೇರಿ ಪುಡಿಯನ್ನು ವಾರ್ನಿಶ್ ನಲ್ಲಿ ಸ್ವಲ್ಪ ಸ್ವಲ್ಪವಾಗಿ ಕಲಸಿ ಉದುರು ಉದುರಾಗಿ ಹಚ್ಚುತ್ತಿದ್ದರು. ಅದು ಪುಡಿಯಾಗೇ ಇದ್ದು ಕೆಲವೊಮ್ಮೆ ಹಾರಿ ಹೋಗಿ ಕೆಳಗಿನ ಕೆಮ್ಮಣ್ಣು ಕಾಣಿಸುತ್ತಿತ್ತು.
ಒಮ್ಮೆ ಅಪ್ಪ ವಾಕಿಂಗಿಗೆ ಹೋದಾಗ ನಾನು ಬ್ರಶ್ ಹಿಡಿದೆ. ಉಳಿದೆಲ್ಲ ಬಣ್ಣ ಕೊಟ್ಟಿದ್ದರೂ ಸೊನೇರಿ ಎಂದೂ ಕೊಟ್ಟಿರಲಿಲ್ಲ. ಅಂದು ಧೈರ್ಯ ಮಾಡಿ ಕೊಂಚವೇ ಪುಡಿಯನ್ನು ನೀರಾಗಿ ಕಲಸಿದೆ. ಅದು ಒಳ್ಳೆ ದ್ರಾವಣದಂತಾಯಿತು. ಕೊಟ್ಟ ನಂತರ ಆಭರಣಗಳೆಲ್ಲ ಮಿರಿಮಿರಿ ಮಿಂಚಲಾರಂಭಿಸಿದವು. ಕೆಮ್ಮಣ್ಣು ಇಲ್ಲದೇ ಪ್ರೈಮರ್.. ಬಿಳಿ ಬಣ್ಣ ಇದ್ದಲ್ಲೂ ಕೊಟ್ಟೆ. ಅದೇ ಮಿಂಚು. ಉತ್ಸಾಹದಿಂದ ಕೊಡುತ್ತಲೇ ಇದ್ದೆ. ಹಿಂದೆ ಅಪ್ಪ ಬಂದು ನಿಂತು ನೋಡಿ ಬೆರಗಾದರು. “ಹೆಂಗ ಕೊಟ್ಟಿ?” ಎಂದು ಕೇಳಿದರು. ಮುಟ್ಟಿ ನೋಡಿದರು. ಊದಿ ಪುಡಿ ಹಾರುತ್ತದೆಯೇ ನೋಡಿದರು. ಸಂತೋಷದಿಂದ ಕಣ್ಣರಳಿಸಿ ” ಭಾಳ ಛಂದಾತು. ಇನ್ನ ಮ್ಯಾಲಿಂದ ಸೊನೇರಿ ನೀನ ಕೊಡು” ಎಂದು ಬಿಟ್ಟರು. ಹೀಗೆ ನಿಧಾನವಾಗಿ ಅಪ್ಪನ ತೆಕ್ಕೆಯಿಂದ ನನ್ನ ಬಳಿ ಬರುತ್ತಿದ್ದ ಗಣಪ. ” ಕಣ್ಣು ಸಮಾ ಕಾಣಸುದುಲ್ಲವಾ. ಗಣಪತಿಗೆ ಕಣ್ಣು..ನಾಮಾ ನೀನ ಬರದಬಿಡು” ಎಂದಾಗ ನನ್ನ ಅರ್ಧಕ್ಕಿಂತಲೂ ಹೆಚ್ಚೇ ಬಂದಿದ್ದ. ಪ್ರಯೋಗಗಳು ಸಫಲವಾಗಿದ್ದವು. ಆದರೂ ಪೂರ್ಣವಾಗಿ ಅವನ ಸೇವೆ ಮಾಡಲು ಎಷ್ಟೋ ವರ್ಷಗಳವರೆಗೆ ಕಾಯಬೇಕಾಯಿತು. ಇಂದು ನನ್ನ ಕೈಲಿ ವಿಧವಿಧವಾಗಿ ರೂಪುಗೊಳ್ಳುವ ಗಣಪ ಸುಂದರ ಮಣಿ.. ಹರಳುಗಳಿಂದ ಅಲಂಕೃತಗೊಳ್ಳುತ್ತಾನೆ. ಅಪ್ಪ ಇರಬೇಕಿತ್ತು.. ಇಂದಿನ ಗಣಪನನ್ನು ನೋಡಬೇಕಿತ್ತು ಎನ್ನುವ ಭಾವ ಬಲವಾಗುತ್ತದೆ. ನಮ್ಮ ಗಣಪ ಇಂದು ಚಂದ್ರಯಾನ ಮಾಡಿ ಚಂದ್ರನ ಮೇಲಿಳಿದಿದ್ದಾನೆ. ಪತಿ ಮಹೇಶ್ ಕರ್ಣಮ್ ರ ಉತ್ಸಾಹಭರಿತ ಬೆಂಬಲವಿದ್ದೇ ಇದೆ. ಮಗ ಅಮೃತ್ ಕೂಡ ಬ್ರಶ್ ಹಿಡಿಯುತ್ತಾನೆ. ವೈಭವ್, ವಿಭಾ ಸಾಗರದಾಚೆಯಿಂದ ” ಎಲ್ಲಿಗೆ ಬಂದ ಗಣಪ? ಈ ಬಾರಿ ಏನು ಥೀಮು? ” ಎಂದು ಕೇಳುತ್ತಾರೆ. ಆದರೂ ಅಂದಿನ ನೆನಪಿನ ಗಣಿ ಅಗೆಯುತ್ತಲೇ ಇರುತ್ತೇನೆ. ಬಹಶಃ ನಾನು ಗಣೇಶನನ್ನು ಮಾಡುವುದೇ ಅಪ್ಪ ಮತ್ತು ಗಣೇಶನೊಂದಿಗಿನ ಅನುಸಂಧಾನಕ್ಕಾಗಿ. ಆದರೂ ಪ್ರತಿ ಬಾರಿ ಅಪ್ಪನನ್ನು ನೆನೆದು ಹನಿಯೊಂದು ಮೂಡದೇ ಇರುವುದಿಲ್ಲ. ಮಧುರಾ (ಅಲಕಾ) ಕರ್ಣಮ್

2022-ಅಭಯ ಹಸ್ತ ಗಣೇಶ
2022-ಅಭಯ ಹಸ್ತ ಗಣೇಶ – ಈ ಬಾರಿಯ ಗಣೇಶ.. ನಾನು ಕೈಯ್ಯಾರೆ ತಯಾರಿಸಿ ಪೂಜೆ ಮಾಡಿಸಿಕೊಂಡವ.. ಮತ್ತೆ ಅಪ್ಪನನ್ನು ನೆನಪಿಸಿದವ.. ಅಪ್ಪ ಗಣಪತಿ ಮಾಡುವಾಗ ಹಿಡಿದ ಸಲಕರಣೆಗಳನ್ನು ಹಿಡಿದು ತಿದ್ದುವಾಗ..ತೀಡುವಾಗ ಅಪ್ಪನನ್ನು ಮುಟ್ಟಿದ ಅನುಭೂತಿ. ನೋಡಲು.. ಮುಟ್ಟಲು ಬಂದ ಮಕ್ಕಳನ್ನು ” ಬಾ.. ನಿನಗೂ ಸೊಂಡಿ ಹಚ್ಚತೇನಿ” ಎಂದು ಹೆದರಿಸುತ್ತಿದ್ದ ಪರಿ ಅನನ್ಯ. ಮಕ್ಕಳು ಅಷ್ಟು ದೂರ ಓಡಿ ಹೋಗುತ್ತಿದ್ದವು. ರಾತ್ರಿಯೆಲ್ಲ ಯಾವುದೋ ಘಟನೆಗಳನ್ನು ನೆನೆಸುತ್ತಾ ಅಮ್ಮ, ಅಪ್ಪರೊಡನೆ ನಗುತ್ತಾ ಬಣ್ಣ ಕೊಡುವಾಗ ರೂಪುಗೊಳ್ಳುತ್ತಿದ್ದ ಗಣೇಶ ನಮ್ಮ ಅನುಬಂಧವನ್ನು ಇನ್ನೂ ಗಟ್ಟಿಗೊಳಿಸುತ್ತಿದ್ದ. ಇಲಿಯಿಂದ.. ಮೋದಕದಿಂದ ಆರಂಭಿಸಿ ಗಣೇಶನನ್ನು ಮಾಡುವವರೆಗೆ ಬಂದದ್ದು ಅಪ್ಪ, ಅಮ್ಮನ ಆಶೀರ್ವಾದವೇ. ಎಲ್ಲವನ್ನೂ ಜೋಡಿಸಿಕೊಟ್ಟು ” ಆತೇನು?.. ಎಲ್ಲಿಗೆ ಬಂತು?” ಎಂದು ಆಫೀಸಿನ ಮ್ಯಾನೇಜರಿಕೆಯನ್ನು ಮನೆಯಲ್ಲೂ ನಡೆಸುತ್ತಾ ಸಹಕರಿಸುವ ಪತಿ ಮಹೇಶರಿಗೆ, ” ಅಮ್ಮಾ, ಇಲಿ ಮಾಡ್ತೇನಿ. ಮೋದಕಾ ಮಾಡ್ತೇನಿ. ಪ್ರೈಮರ್ ಬಣ್ಣ ನಾನ ಕೊಡ್ತೇನಿ” ಎಂದು ಕೊಡುವ ಅಮೃತನಿಗೆ, “ಗಣೇಶ ಎಲ್ಲಿಯವರೆಗೆ ಬಂದಾ? ” ಎಂದು ಅಮೆರಿಕೆಯಿಂದ ಕೇಳುವ ಮಗ, ಸೊಸೆ ವೈಭವ್, ವಿಭಾರಿಗೆ ಪ್ರೀತಿಪೂರ್ವಕ ವಂದನೆಗಳು. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರವನ್ನು ನೋಡುತ್ತಾ ನಾನು ನಿರ್ಮಿಸಬಲ್ಲೆನೆಂಬ ಭರವಸೆ ನನಗೇ ಇಲ್ಲದಾಗ ಅರಿವೇ ಆಗದಂತೆ ತಾನೇ ತಾನಾಗಿ ಮೂಡಿ ಬಂದು.. ರೂಪ ತಳೆದು ನಿಂದು.. ನಾನು ಮಾಡಿದೆನೆಂಬ ಹಿರಿಮೆ ಕೊಡುವ ವಾತ್ಸಲ್ಯಮೂರ್ತಿ ಮಹಾಗಣಪನಿಗೆ ದೊಡ್ಡ ಸಲಾಮ್. ಮಧುರಾ (ಅಲಕಾ) ಕರ್ಣಮ್

2021 – ಮಂಗಲ ಮೂರ್ತಿ ಗಣೇಶ
2021 – ಮಂಗಲ ಮೂರ್ತಿ ಗಣೇಶ – ಮತ್ತೆ ಬರುತ್ತಿದ್ದಾನೆ ನನ್ನ ಗಣಪ
ಮಂಗಲ ಮೂರ್ತಿಯಾಗಿ.. ಅಪ್ಪನ ನೆನಪು ಕಾಡುತ್ತದೆ. ನಾನು ಹುಟ್ಟುವ ಮೊದಲೇ ಅಪ್ಪ ಗಣೇಶನನ್ನು ಮಾಡಲು ಆರಂಭಿಸಿದರಂತೆ. ಪಿ.ಡಬ್ಲೂ.ಡಿ.ಯ ನೌಕರಿ ಸಂಭಾಳಿಸುತ್ತ ರಾತ್ರಿಯೆಲ್ಲ ಮಾಡುತ್ತಿದ್ದರು. ಬಹುಶಃ ತಮ್ಮ ಮದುವೆಗಿಂತಲೂ ಮೊದಲು. ಅವರ ತಾಯಿ.. ಎಂದರೆ ನನ್ನಜ್ಜಿ ಮನೆಯಲ್ಲೇ ಮಾಡುತ್ತಿದ್ದರಂತೆ. ಅದೇ ಕಲೆ ಅಪ್ಪನಿಗೂ ಒಲಿದು ಬಂತು. ಆಗೆಲ್ಲ ಹಳದಿ ಬಣ್ಣದ ಶೇಡು ಎಂಬ ಮಣ್ಣು ದೊರೆಯುತ್ತಿತ್ತು. ಆದರೆ ಅದರಲ್ಲಿ ಜಿಗಿ.. ಅಂಟು ಕಡಿಮೆ. ಅದರಲ್ಲಿ ಹತ್ತಿಯನ್ನು ಸೇರಿಸಿ ಕುಟ್ಟಿ ಮನೆಗೆ ಮತ್ತು ಆತ್ಮೀಯರಿಗೆ ಮಾಡುತ್ತಿದ್ದರಂತೆ. ಕ್ರಮೇಣ ಇಂದಿನ ಗುಜರಾತಿ ಮಿಟ್ಟಿ.. ಸಿಮೆಂಟಿನ ಬಣ್ಣದ ಮಣ್ಣು ಮನೆಗೆ ಬಂತು. ಜೊತೆಗೆ ಮದುವೆಯಾಗಿ ಅಮ್ಮ… ಮುಂದೆ ನಾನು. ಆಗ ಒಂದಷ್ಟು ಸಲೀಸಾಯಿತು. ಮುಂದೆ ಕೆಲವೇ ದಿನಗಳಲ್ಲಿ ತಯಾರಿಸಲು ಕೋರುತ್ತಿದ್ದ ಜನರ ಸಂಖ್ಯೆ ಜಾಸ್ತಿಯಾಯಿತು. ಆಗ ಗಣೇಶನ ಅಚ್ಚು ಮನೆಗೆ ಬಂತು. ಅಚ್ಚಿನಲ್ಲಿ ದೇಹಭಾಗವೆಲ್ಲ ಮೂಡಿ ಬರುತ್ತಿತ್ತು. ಕೈ, ಬೆರಳುಗಳು ಸೊಂಡಿಲನ್ನು ಮಾತ್ರ ಪ್ರತ್ಯೇಕವಾಗಿ ಮಾಡಬೇಕಾಗುತ್ತಿತ್ತು. ಅಪ್ಪನಿಗೆ ಇಲ್ಲವೆಂದೇ ಗೊತ್ತಿಲ್ಲ. ಹೀಗಾಗಿ ಸುಮಾರು ಎಪ್ಪತ್ತರಿಂದ ಎಂಬತ್ತು ಗಣಪತಿಗಳ ಆರ್ಡರ್ ಬರತೊಡಗಿದವು. ಆಗ ಅಮ್ಮನ ಶ್ರಾವಣ ಮಾಸದ ಗೌರಿಯ ಹಾಡು ಕೇಳುತ್ತ ನಾನೂ ಅಚ್ಚು ಹಾಕುತ್ತಿದ್ದೆ. ಬಣ್ಣ ಹಾಕುತ್ತಿದ್ದೆ. “ನಿಮ್ಮವ್ವ ಪರಾಪರಾ ಬಣ್ಣಾ ಬಳೀತಾಳ” ಎಂದು ಬೈಯುತ್ತಿದ್ದ ಅಪ್ಪ ನಂತರ ಅದೇ ಪಾವನವೆನ್ನತೊಡಗಿದರು. ಮೂವರೂ ಹರಟೆ ಹೊಡೆಯುತ್ತ ಮಧ್ಯರಾತ್ರಿಯವರೆಗೂ ಬಣ್ಣ ಮಾಡುತ್ತಿದ್ದೆವು. ಕ್ರಮೇಣ ಅಪ್ಪ “ಯಾಕೋ ಸೋನೇರಿ ಕಲರ್ ನನ್ನ ಕೈಲೇ ಛೊಲೊ ಬರವಲ್ತು. ನೀನ ಮಾಡಿಬಿಡು. ಕಿರೀಟ ಆಭರಣಕ್ಕೆಲ್ಲಾ ಕೊಟ್ಟಬಿಡು” ಎನ್ನಲಾರಂಭಿಸಿದರು. ಮೆತ್ತಗೆ ನನ್ನತ್ತ ವಾಲುತ್ತಿದ್ದುದು ಹೆಚ್ಚಾಗಿ ” ಕಣ್ಣು ಸಮಾ ಕಾಣಸವಲ್ತು. ಗಣಪತಿ ಕಣ್ಣು ನಾಮ ನೀನ ಬರದಬಿಡು..” ಎನ್ನುವಲ್ಲಿಗೆ ಬಂದು ನಿಂತಿತು. ಆಗಲೇ ಅಪ್ಪನಿಗೆ ಎಪ್ಪತ್ತಾಗಿತ್ತಲ್ಲ…
ದುವೆಯಾಗಿ ಮಕ್ಕಳಾದ ಮೇಲೂ ಗಣಪತಿಯ ಸೇವೆಗೆಂದು ಎಂಟು.. ಹತ್ತು ದಿನ ಹೋಗುವುದೇ. ” ಗಣಪತಿನ್ನ ಮುಟ್ಟಬಾರದು. ಅಜ್ಜಾ ಗಣಪತಿಗತೆ ಸೊಂಡಿ ಹಚ್ಚಿ ಕೂಡಸ್ತಾರ” ಎಂದಾಕ್ಷಣ ಮಗ ಹತ್ತಿರ ಹಾಯುತ್ತಿರಲಿಲ್ಲ. ಅಪ್ಪನದು ನಿಜವಾದ ಸೇವೆ. ಎಂದೂ ಗಣಪತಿಯನ್ನು ಮಾರಿದವರಲ್ಲ. ಇಷ್ಟು ರೇಟು ಎಂದವರಲ್ಲ. ಗಣಪತಿಯನ್ನು ಎತ್ತಿಕೊಂಡ ಜಾಗದಲ್ಲಿ ವಿಳೆದೆಲೆ, ದಕ್ಷಿಣೆ ಇಡುವ ಪದ್ಧತಿ. ಸವಾ ರುಪಾಯಿ.. ಅಂದರೆ ಒಂದೂಕಾಲು ರೂಪಾಯಿ ಇಡುವವರಿದ್ದರು. ನೂರು, ಇನ್ನೂರು, ನಾನ್ನೂರು ಇಟ್ಟವರಿದ್ದರು. ಎಲ್ಲರಿಗೂ ಅಪ್ಪನ ಕಿರುನಗೆಯೊಂದೇ ಉತ್ತರ. “ಇಂತಿಷ್ಟಂತ ಹೇಳ್ರಿ. ಮಣ್ಣು, ಬಣ್ಣದ ರೊಕ್ಕಾರೆ ಬರ್ಲಿಕ್ಕೆ ಬ್ಯಾಡೇನು?” ಎಂದು ಪ್ರಶ್ನಿಸುತ್ತಿದ್ದ ಅಮ್ಮನಿಗೆ ” ಕೊಡಾವಾ ಕೊಡ್ತಾನೇಳು” ಎಂದರಾಯಿತು. ಕೊನೆಯವರೆಗೆ ಹಾಗೇ ಸಾಗಿ ಬಂತು ಪಯಣ. ತಪ್ಪು, ಒಪ್ಪುಗಳು ಆಗಿಲ್ಲವೆಂದಲ್ಲ. ಕೆಲವೊಮ್ಮೆ ಲೆಕ್ಕ ತಪ್ಪಿ ಒಂದು ಮೂರ್ತಿ ಉಳಿದುಬಿಟ್ಟದ್ದಿದೆ. ಒಮ್ಮೊಮ್ಮೆ ಕಡಿಮೆಯಾಗಿ ಹೌಹಾರಿದ್ದಿದೆ. ಒಮ್ಮೆಯಂತೂ ಕಡಿಮೆ ಬಿದ್ದಾಗ ಕೊಡುವವರಿಗೆ ಕೊಟ್ಟು ತಾವೇ ದುಡ್ಡು ಕೊಟ್ಟು ತಂದರಂತೆ. ನಂತರ ಲಿಸ್ಟ ಮಾಡುವ… ಗಣಪತಿಗಳಿಗೆ ಹೆಸರು ಬರೆದಿಡುವ ಪದ್ಧತಿ ಜಾರಿಗೆ ಬಂದಿತು. ಮತ್ತೊಮ್ಮೆ ಮಾರಿಹಾಳದ ಗಣೇಶಜ್ಜ …ಅಪ್ಪನ ಸೋದರಮಾವ ಗಣಪತಿ ಹೇಳಿದ್ದರು. “ಇಷ್ಟು ಧೂರ ಬೆಳಗಾವಿಗೆ ಬಂದು ಹೆಂಗ ವೈತಾನ? ” ಎಂದು ಉಡಾಫೆ ಮಾಡಿ ಅಪ್ಪ ಅವರ ಹೆಸರಿನ ಗಣಪತಿಯನ್ನೇ ಮಾಡಿರಲಿಲ್ಲ. ಗಣೇಶನ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಅಜ್ಜ ಮೊಮ್ಮಗ ಆನಂದನೊಂದಿಗೆ… ದೊಡ್ಡ ಡಬ್ಬದೊಂದಿಗೆ ಹಾಜರು. ಅಪ್ಪನ ಮೋರೆಯ ಬಣ್ಣ ಹಾರಿತು. ನಮ್ಮ ಗಣೇಶ ಅವರ ಪಾಲಾದ. ಸುತ್ತಲೂ ಹಳೆಯ ಬಟ್ಟೆ ಸುತ್ತಿ ಭದ್ರವಾಗಿಸಿ ಬೀಳ್ಕೊಟ್ಟೆವು. ಅಜ್ಜ ಮೊಮ್ಮಗನೊಂದಿಗೆ ಬಸ್ಸಿನಲ್ಲೇ ಗಣಪತಿ ತೆಗೆದುಕೊಂಡು ಹೋದರು. ರಾತ್ರೋರಾತ್ರಿ ಇನ್ನೊಬ್ಬ ಗಣೇಶ ಸಿದ್ಧನಾದ. ಮರುದಿನ ಹಸಿ ಗಣೇಶನಿಗೇ ಬಣ್ಣ ಮೆತ್ತಿ ಕೂರಿಸಿದ್ದಾಯಿತು. ಜೋಡು ಗಣೇಶರ ಪದ್ಧತಿ. ಅಗೆಯುತ್ತ ಹೊರಟರೆ ಸುಂದರ ನೆನಪುಗಳು… ಈ ಗಣಪತಿನೂ ಭಾರಿನ ಬಿಡ್ರಿ. ನಾನು ಆರಂಭಿಸಿ ಸುಮಾರು ಆರು ವರ್ಷಗಳಾದವು. ಅಪ್ಪನ ಆಶೀರ್ವಾದ.ಪ್ರತಿ ಬಾರಿ ಶುರು ಮಾಡುವಾಗ ನನ್ನಿಂದ ಸಾಧ್ಯವೇ ಎನ್ನುವ ಭಾವ. ಸಹಕಾರ ಕೊಡುವ ಪತಿ, ಮಕ್ಕಳು ಮಣ್ಣು, ಬಣ್ಣ ತಂದು ಕೊಡುತ್ತಾರೆ. ಮುಂದೆ ನೋಡಿ.. ಗಣಪ ತನ್ನಿಂದ ತಾನೇ ಮೂಡಿ ಬಂದು ಸುಂದರ ಮೂರ್ತಿಯಾಗುತ್ತಾನೆ. ಕೊನೆಯಲ್ಲಿ ನಾನೇ ಮಾಡಿದೆನೆ.. ಎಂದು ಅಚ್ಚರಿ ಪಡುವಂತೆ…. ಅದು ಅವನೇ ಮಾಡಿಸಿಕೊಂಡದ್ದು. ಜೀವನದ ವ್ಯಾಖ್ಯೆಯನ್ನು ಒಂದು ಹಬ್ಬದಲ್ಲಿ ಸಮೀಕರಿಸುತ್ತಾನವ. ಬರುವ ಆನಂದ ಸಂಭ್ರಮ…. ಆಚರಣೆಯ ಸಡಗರ.. ವಿಸರ್ಜನೆಯ ದುಃಖ.. ಎಲ್ಲವನ್ನೂ ತೋರಿಸಿ ಬದುಕಿನ ಪಾಠ ಹೇಳಿ ಎಂದು ನಿರ್ಮೋಹಿಯಾಗಲು ಹೇಳುತ್ತಾನೆ. ನನ್ನಿಂದ ಸಾಧ್ಯವೇ.. ಎರಡು ಹನಿಗಳಾದರೂ ಬಂದೇ ಬರುತ್ತವೆ. ಏನೇ ಆದರೂ ಗಣಪತಿ ಮಾಡುವಾಗ ಅಜ್ಜಿ, ಅಪ್ಪ ನೆನಪಾಗುತ್ತಾರೆ. ಅಪ್ಪ ಉಪಯೋಗಿಸುತ್ತಿದ್ದ ಸಲಕರಣೆಗಳನ್ನು ಕೈಲಿ ಹಿಡಿದಾಗ ಅಪ್ಪನನ್ನೇ ಮುಟ್ಟಿದ ಆನಂದ. ದಾಸರ ಪದಗಳು, ಭಾವಗೀತೆಗಳು, ರಫಿ, ಲತಾ, ಕಿಶೋರ್, ಆಶಾ ಎಲ್ಲ ಬಂದು ಗಣಪ ಮುಗಿಯುವವರೆಗೂ ಹಾಡುತ್ತಾರೆ. ನೆನಪಿನ ಪಯಣದಲ್ಲಿ ಮತ್ತೊಂದು ವರ್ಷ. ಮಾಡಿಸಿಕೊಳ್ಳುವ ಗಣಪನಿಗೆ.. ದಾರಿ ತೋರಿಸಿದ ಅಪ್ಪನಿಗೆ.. ಇಬ್ಬರಿಗೂ ದೊಡ್ಡ ಸಲಾಮ್. ಮಧುರಾ (ಅಲಕಾ) ಕರ್ಣಮ್

2020 -ಪುಣೆಯ ದಗಡುಶೆಟ್ ಗಣೇಶ

2019 – ಲಕ್ಷ್ಮಿರೂಪಿ ಗಣೇಶ

2017 – ಕೃಷ್ಣರೂಪಿ ಗಣೇಶ

2016 – ವಿದ್ಯಾ ಗಣೇಶ

2015 – ಸಂಕಷ್ಟಹರ ಗಣೇಶ